ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ‘ವೈರಮುಡಿ ಬ್ರಹ್ಮೋತ್ಸವ’ದ ಅಂಗವಾಗಿ ವಜ್ರಖಚಿತ ವೈರಮುಡಿ, ಕೃಷ್ಣರಾಜಮುಡಿ ಮತ್ತು ಇತರ ಆಭರಣಗಳನ್ನು ನಗರದಿಂದ ಸೋಮವಾರ ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.
ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 7.05ಕ್ಕೆ ಹೊರಗೆ ತೆಗೆಯಲಾಯಿತು.
ಜಿಲ್ಲಾಧಿಕಾರಿ ಕುಮಾರ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ವೈರಮುಡಿಗಳ ಪೆಟ್ಟಿಗೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು, ಅವುಗಳಿಗೆ ಹೂವಿನ ಹಾರ ತೊಡಿಸಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರಿಗೆ ಸಿಹಿಬೂಂದಿ ಮತ್ತು ಕಡ್ಲೆಸಕ್ಕರೆ ವಿತರಿಸಲಾಯಿತು.
ಹಿಂದಿನ ವರ್ಷಗಳಲ್ಲಿ ಜಿಲ್ಲಾ ಖಜಾನೆ ಆವರಣದಲ್ಲೇ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ಆಭರಣಗಳ ಗಂಟುಗಳನ್ನು ಮುಟ್ಟಿ, ನಮಸ್ಕರಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, 7 ವರ್ಷಗಳಿಂದ ಆ ಪದ್ಧತಿಗೆ ತಿಲಾಂಜಲಿ ಹೇಳಲಾಗಿತ್ತು. ಅದು ಈ ವರ್ಷವೂ ಮುಂದುವರಿಯಿತು. ಪೂಜೆ ಬಳಿಕ ಆಭರಣಗಳ ಗಂಟುಗಳನ್ನು ವಾಹನದಲ್ಲಿ ಇರಿಸಲಾಯಿತು.
ವೈರಮುಡಿಗೆ ಪೂಜೆ ಸಲ್ಲಿಕೆ:
ಜಿಲ್ಲಾ ಖಜಾನೆಯಿಂದ ವೈರಮುಡಿ ಹೊರಟು ಮೊದಲಿಗೆ ಲಕ್ಷ್ಮಿ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ರಾಜಮುಡಿ ಹಾಗೂ ವೈರಮುಡಿಗೆ ಪೂಜೆಯನ್ನು ಸಲ್ಲಿಸಲಾಯಿತು. ವೈರಮುಡಿ ಪೆಟ್ಟಿಗೆನ್ನು ಭಕ್ತರು ಸ್ಪರ್ಶಿಸಿ ಭಕ್ತಿಪರವಶಗೊಂಡರು. ಭಕ್ತರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.
ದೇಗುಲದ ಗರ್ಭಗುಡಿಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಅಲ್ಲಿನ ಕೊಠಾರ ಮಂಟಪದಲ್ಲಿ ವೈರಮುಡಿ, ರಾಜಮುಡಿ ಗಂಟುಗಳನ್ನಿಟ್ಟು ಚಲುವನಾರಾಯಣಸ್ವಾಮಿ ದೇವರ ಒಕ್ಕಲಿನವವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಅಲ್ಲಿಂದ 7.37ಕ್ಕೆ ವಾಹನವು ಮೇಲುಕೋಟೆಯತ್ತ ಸಾಗಿತು. ಈ ವೇಳೆ ಲಕ್ಷ್ಮಿಜನಾರ್ದನ ದೇವಾಲಯದ ಪಕ್ಕದಲ್ಲಿನ ಶ್ರೀನಿವಾಸಸ್ವಾಮಿ ದೇವಾಲಯ ಬಳಿಯೂ ಮಹಿಳೆಯರು ಪೂಜೆ ಸಲ್ಲಿಸಿದರು.
ಪ್ರಥಮ ಬಾರಿಗೆ ಅನ್ನದಾಸೋಹ:
ಸುಮಾರು 6 ತಿಂಗಳಿಂದ ದೇವಸ್ಥಾನದ ವತಿಯಿಂದ ಅನ್ನದಾಸೋಹ ಪ್ರಾರಂಭವಾಗಿದೆ. ಈ ಬಾರಿ ಮೊದಲನೇ ಬಾರಿಗೆ ವೈರಮುಡಿ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ದಿನದ 24 ಗಂಟೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಯಾವುದೇ ಅಹಿತಕರ ಘಟನೆ ಜರುಗದಿರಲು 40ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಆಗಮಿಸುವ ಭಕ್ತರಿಗೆ 150ಕ್ಕೂ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಒಂದೂವರೆ ಲಕ್ಷಕ್ಕೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿಂದ ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನವರೆಗೆ ವಯಸ್ಸಾದವರಿಗೆ ಸಂಚರಿಸಲು ಅನುಕೂಲವಾಗಲು 10 ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 1200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ಎಲ್ಲಾ ನಿಟ್ಟಿನಲ್ಲೂ ಭದ್ರತ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಂಜೆ 4.30ರ ವೇಳೆಗೆ ವೈರಮುಡಿಯು ಮೇಲುಕೋಟೆ ದೇವಾಲಯ ತಲುಪಿ, ಸಂಜೆ 6 ಗಂಟೆಗೆ ‘ಪಾರ್ಕಾವಣೆ’ (ಆಭರಣಗಳ ಪರಿಶೀಲನೆ) ಪ್ರಾರಂಭಿಸಿ ರಾತ್ರಿ 8 ಗಂಟೆಗೆ ವೈರಮುಡಿ ಉತ್ಸವವು ವಿಜೃಂಭಣೆಯಿಂದ ಜರುಗಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಮೇಲುಕೋಟೆಯ ಪುರೋಹಿತರು ಇತರರು ಪಾಲ್ಗೊಂಡಿದ್ದರು.
ಭಕ್ತರಿಂದ ಪಾನಕ ಮಜ್ಜಿಗೆ ವಿತರಣೆ
ವಾಹನದಲ್ಲಿ ಮೆರವಣಿಗೆಯ ಮೂಲಕ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯವನ್ನು ತಲುಪಲು ವ್ಯವಸ್ಥೆ ಮಾಡಲಾಗಿತ್ತು. ವೈರಮುಡಿ ಆಭರಣಗಳನ್ನು ಬಿಗಿ ಬಂದೋಬಸ್ತ್‌ನೊಂದಿಗೆ 80ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಮೆರವಣಿಗೆ ಮೂಲಕ ಸಾಗಿತು. ಅಲ್ಲಿನ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮಾರ್ಗದುದ್ದಕ್ಕೂ ಹಳ್ಳಿಗಳಲ್ಲಿ ರಸ್ತೆಗಳಲ್ಲಿ ರಂಗೋಲಿ ಇಟ್ಟು ತಳಿರು ತೋರಣ ಚಪ್ಪರ ಹಾಕಿಕೊಂಡು ಕಾಯುತ್ತಿದ್ದ ಭಕ್ತರು ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.