ADVERTISEMENT

ಮಂಡ್ಯ: ಪರ್ಯಾಯ ವ್ಯವಸ್ಥೆಗೆ ವ್ಯಾಪಾರಿಗಳ ಒತ್ತಾಯ

ತರಕಾರಿ ಮಾರುಕಟ್ಟೆ ನವೀಕರಣ: ಮಳಿಗೆ ಖಾಲಿ ಮಾಡುವಂತೆ ನಗರಸಭೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:05 IST
Last Updated 11 ಏಪ್ರಿಲ್ 2022, 16:05 IST
ತರಕಾರಿ ಮಾರುಕಟ್ಟೆ ನವೀಕರಣಗೊಳ್ಳುವವರೆಗೆ ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವ್ಯಾಪಾರಿಗಳು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಅವರಿಗೆ ಮನವಿ ಸಲ್ಲಿಸಿದರು
ತರಕಾರಿ ಮಾರುಕಟ್ಟೆ ನವೀಕರಣಗೊಳ್ಳುವವರೆಗೆ ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವ್ಯಾಪಾರಿಗಳು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಅವರಿಗೆ ಮನವಿ ಸಲ್ಲಿಸಿದರು   

ಮಂಡ್ಯ: ಪೇಟೆಬೀದಿ ಸಮೀಪದ ನಗರಸಭೆ ತರಕಾರಿ ಮಾರುಕಟ್ಟೆ ನವೀಕರಣಗೊಳ್ಳುತ್ತಿದ್ದು ಅಲ್ಲಿ ಚಿಲ್ಲರೆಯಾಗಿ ವಹಿವಾಟು ನಡೆಸುತ್ತಿರುವ ವರ್ತಕರಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ವ್ಯಾಪಾರಿಗಳು, ಮಳಿಗೆ ಮಾಲೀಕರು ಸೋಮವಾರ ನಗರಸಭೆ ಅಧ್ಯಕ್ಷ ಎಚ್‌.ಎಚ್‌.ಮಂಜು ಅವರಿಗೆ ಮನವಿ ಸಲ್ಲಿಸಿದರು.

ಕಳೆದ 40 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಸದ್ಯ ಮಾರುಕಟ್ಟೆ ನವೀಕರಣ ಕಾಮಗಾರಿ ಆರಂಭವಾಗಿದ್ದು ವಹಿವಾಟು ಸ್ಥಗಿತಗೊಂಡಿದೆ. ನಾವು ನಿಯಮಿತವಾಗಿ ಮಳಿಗೆ ಕಂದಾಯ ಮತ್ತು ಬಾಡಿಗೆಯನ್ನು ಕಟ್ಟಿಕೊಂಡು ಬಂದಿದ್ದೇವೆ. ನಮಗೆ ಪೇಟೆಬೀದಿ ಸಮೀಪದಲ್ಲಿಯೇ ಪರ್ಯಾಯ ಜಾಗ ಕೊಡಬೇಕು ಎಂದು ಒತ್ತಾಯಿಸಿದರು.

ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಕೆಲವು ವರ್ತಕರು ಸ್ಥಳಾಂತರಗೊಂಡಿದ್ದಾರೆ. ಅದು ನಗರದಿಂದ ದೂರವಿರುವ ಕಾರಣ ಕೆಲವರು ಅಲ್ಲಿಗೆ ಹೋಗುತ್ತಿಲ್ಲ. ಪೇಟೆಬೀದಿ ಮಾರುಕಟ್ಟೆ ನವೀಕರಣ ಕಾಮಗಾರಿ ಕೈಗೊಳ್ಳಲು ಮಳಿಗೆ ಖಾಲಿ ಮಾಡಲು ನಗರಸಭೆ ಅಧಿಕಾರಿಗಳು ಸೂಚಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣವಾಗುವವರೆಗೂ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ ‘ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ವ್ಯಾಪಾರಸ್ಥರಿಗೆ ಈಗಾಗಲೇ ತಿಳಿಸಲಾಗಿದೆ. ಈ ಬಗ್ಗೆ ಪೌರಾಯುಕ್ತರ ಜೊತೆಗೂ ಚರ್ಚೆ ನಡೆಸಲಾಗಿದೆ. ಜೊತೆಗೆ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಬದಲಿ ವ್ಯವಸ್ಥೆ ಮಾಡಲು ಪರಿಶೀಲನೆ ನಡೆಸಲಾಗುವುದು’ ಎಂದರು.

‘ಮಾರುಕಟ್ಟೆ ನವೀಕರಣ ಕಾಮಗಾರಿಯನ್ನು 13–14 ತಿಂಗಳೊಳಗಾಗಿ ಮುಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಸಹಕಾರ ನೀಡಬೇಕು. ಆದಷ್ಟು ಬೇಗ ಮಳಿಗೆ ಖಾಲಿ ಮಾಡಿಕೊಟ್ಟರೆ ಭೂಮಿಪೂಜೆ ಆರಂಭಿಸಲಾಗುವುದು. ಎಪಿಎಂಸಿ ಮಾರುಕಟ್ಟೆಗೆ ಜನರು ಬರುತ್ತಿಲ್ಲ ಎಂಬ ಮನವಿಯನ್ನು ಪರಿಶೀಲನೆ ಮಾಡಲಾಗುವುದು. ಪರ್ಯಾಯ ವ್ಯವಸ್ಥೆಗೆ ಅವಕಾಶ ನಿಡಲಾಗುವುದು’ ಎಂದರು.

ಪೌರಾಯುಕ್ತ ಎಸ್‌.ಲೋಕೇಶ್‌ ಮಾತನಾಡಿ ‘ಹೊಸ ವಾಣಿಜ್ಯ ಸಂಕೀರ್ಣ ನವೀಕರಣಗೊಳ್ಳುವವರೆಗೂ ವ್ಯಾಪಾರಸ್ಥರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ವ್ಯಾಪಾರಿಗಳು ಮಾತನಾಡಿಕೊಂಡು ಸ್ಥಳವನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದರು.

ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ಬಿ.ಕೆ.ಸೋಮಣ್ಣ, ಪ್ರದೀಪ್‌, ಶ್ರೀನಿವಾಸ್, ಗೌರಮ್ಮ, ಚಿಕ್ಕತಾಯಮ್ಮ ಭಾಗವಹಿಸಿದ್ದರು.

***

₹ 4.97 ಕೋಟಿಗೆ ಟೆಂಡರ್‌

‘ಆರಂಭಿಕವಾಗಿ ತರಕಾರಿ ಮಾರುಕಟ್ಟೆ ನವೀಕರಣಕ್ಕಾಗಿ ₹ 4.97 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ ತಳ ಹಾಗೂ ಮೊದಲ ಮಹಡಿ (ಜಿ ಪ್ಲಸ್‌– ಒನ್‌) ನಿರ್ಮಾಣ ಮಾಡಲಾಗುವುದು. ನಂತರ ವರ್ತಕರ ಪ್ರತಿಕ್ರಿಯೆ ನೋಡಿಕೊಂಡು ಮಹಡಿಗಳನ್ನು ಹೆಚ್ಚಳ ಮಾಡಲಾಗುವುದು’ ಎಂದು ಪೌರಾಯುಕ್ತ ಲೋಕೇಶ್ ಹೇಳಿದರು.

‘ಒಟ್ಟು ಜಿ ಪ್ಲಸ್‌– 3 ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕೆ ಒಟ್ಟಾರೆ ₹ 8 ಕೋಟಿ ವೆಚ್ಚವಾಗಲಿದೆ. ಮಳಿಗೆ ಪಡೆಯುವಲ್ಲಿ ವರ್ತಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.