ADVERTISEMENT

ಇದು ಮಿಮ್ಸ್‌ ಆಸ್ಪತ್ರೆಯೋ? ಯಮಲೋಕವೋ?: ಉಪಲೋಕಾಯುಕ್ತ ಬಿ.ವೀರಪ್ಪ ಬೇಸರ

ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಅನಾವರಣ: ಪ್ರಕರಣ ದಾಖಲಿಸಲು ಉಪ ಲೋಕಾಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 4:14 IST
Last Updated 28 ಮೇ 2025, 4:14 IST
ಮಂಡ್ಯ ನಗರದ ಮಿಮ್ಸ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಗುವಿನ ಆರೋಗ್ಯ ವಿಚಾರಿಸಿದರು  –ಪ್ರಜಾವಾಣಿ ಚಿತ್ರ 
ಮಂಡ್ಯ ನಗರದ ಮಿಮ್ಸ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಗುವಿನ ಆರೋಗ್ಯ ವಿಚಾರಿಸಿದರು  –ಪ್ರಜಾವಾಣಿ ಚಿತ್ರ    

ಮಂಡ್ಯ: ಗಬ್ಬು ನಾರುವ ಶೌಚಾಲಯ, ಹರಿದು ಹೋಗಿರುವ ಹಾಸಿಗೆಗಳು, ಅವಧಿ ಮೀರಿದ ಔಷಧಗಳು, ಬೂಸ್ಟ್‌ ಬಂದಿರುವ ಬ್ರೆಡ್‌, ಕೆಟ್ಟುನಿಂತ ವಾಟರ್‌ ಫಿಲ್ಟರ್‌.. ಮುಂತಾದ ಸಮಸ್ಯೆಗಳನ್ನು ನಗರದ ಮಿಮ್ಸ್‌ ಆಸ್ಪತ್ರೆಯಲ್ಲಿ ಕಣ್ಣಾರೆ ಕಂಡ ಉಪಲೋಕಾಯುಕ್ತ ಬಿ.ವೀರಪ್ಪ ಅವರು ‘ಇದು ಆಸ್ಪತ್ರೆಯೋ? ಯಮಲೋಕವೋ?’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆಸ್ಪತ್ರೆಗೆ ಮಂಗಳವಾರ ಲೋಕಾಯುಕ್ತ ಪೊಲೀಸರ ತಂಡದೊಂದಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು 3 ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು ಮತ್ತು ರೋಗಿಗಳ ಸಮಸ್ಯೆಗಳನ್ನು ಆಲಿಸಿದರು. 

ಜನರು ಸಮಸ್ಯೆ ಹೇಳಿಕೊಳ್ಳಲು ಸತ್ಯ ಹೇಳಲು ಹಿಂಜರಿಯುವುದರಿಂದ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಿಲ್ಲ. ದೂರು ನೀಡಲು ಜನರು ಮುಂದೆ ಬರಬೇಕು. ಆಗ ಮಾತ್ರ ನ್ಯಾಯ ಸಿಗುತ್ತದೆ.
- ಬಿ.ವೀರಪ್ಪ ಉಪ ಲೋಕಾಯುಕ್ತ

ಮೂಳೆ ಮತ್ತು ಕೀಲು ವಿಭಾಗದ ಗಂಡಸರ ವಾರ್ಡ್‌ಗೆ ಭೇಟಿ ನೀಡಿ, ಅಲ್ಲಿ ಹರಿದು ಹೋಗಿದ್ದ ಹಾಸಿಗೆಗಳು ಮತ್ತು ಗಬ್ಬು ನಾರುತ್ತಿದ್ದ ಶೌಚಾಲಯವನ್ನು ನೋಡಿ ಸಿಡಿಮಿಡಿಗೊಂಡರು. ಹೊಸ ಬೆಡ್‌ ಖರೀದಿಸಲು ನಿಮ್ಮ ಬಳಿ ಹಣವಿಲ್ಲವೇ? ಇಂಥ ಬೆಡ್‌ಗಳಲ್ಲಿ ರೋಗಿಗಳು ಮಲಗುವುದು ಹೇಗೆ? ಎಂದು ವೈದ್ಯಕೀಯ ಅಧೀಕ್ಷಕ ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು. 

ADVERTISEMENT

ವಾಟರ್‌ ಫಿಲ್ಟರ್‌ ಕೆಟ್ಟು ಎರಡು ತಿಂಗಳಾದರೂ ಸರಿಮಾಡಿಸಿಲ್ಲ. ಹೀಗಾಗಿ ಕುಡಿಯುವ ನೀರು ಸಿಗುತ್ತಿಲ್ಲ ಎಂದು ರೋಗಿಗಳ ಸಂಬಂದಿಕರು ದೂರಿದರು. ಆಗ, ‘ವಾಟರ್‌ ಫಿಲ್ಟರ್‌ ಸರಿಮಾಡಿಸಲು ನಿಮಗಿರುವ ಸಮಸ್ಯೆ ಏನು? ನೀರು ಸಿಗದೆ ರೋಗಿಗಳು ಪರದಾಡುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?’ ಎಂದು ಉಪ ಲೋಕಾಯುಕ್ತರು ಗರಂ ಆದರು. 

ನಿಂತುಕೊಳ್ಳುವ ಶಿಕ್ಷೆ:

ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ನಿಂತುಕೊಂಡಿದ್ದನ್ನು ಗಮನಿಸಿದ ಉಪ ಲೋಕಾಯುಕ್ತರು, ‘ಇವರಿಗೆ ನಿಂತು ಕೊಳ್ಳುವ ಶಿಕ್ಷೆ ಏಕೆ ಕೊಟ್ಟಿದ್ದೀರಿ. ಕೂಡಲೇ ಆಸನ ವ್ಯವಸ್ಥೆ ಮಾಡಬೇಕು. ರೋಗಿಗಳ ಆರೈಕೆದಾರರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು. 

ಆಂಬುಲೆನ್ಸ್‌ ಸೇವೆಗೆ ದುಪ್ಪಟ್ಟು ದರ:

ಆಸ್ಪತ್ರೆಯಿಂದ 2 ಕಿ.ಮೀ. ದೂರದಲ್ಲಿರುವ ಕಲ್ಲಹಳ್ಳಿ ಬಡಾವಣೆಗೆ ರೋಗಿಗಳಿಂದ ₹4 ಸಾವಿರ ವಸೂಲಿ ಮಾಡಿದ್ದಾರೆ ಎಂದು ಸಾರ್ವಜನಿಕರು ಸಮಸ್ಯೆ ತೋಡಿಕೊಂಡರು. ಆಗ ಉಪಲೋಕಾಯುಕ್ತರು, ‘ಆಂಬುಲೆನ್ಸ್‌ ಚಾಲಕನನ್ನು ಕರೆಸಿ, ನಿಗದಿತ ದರ ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರೆ ಕೆಲಸದಿಂದ ವಜಾ ಮಾಡಿಸುತ್ತೇನೆ’ ಎಂದು ಕಿಡಿಕಾರಿದರು. 

ಪ್ರಕರಣ ದಾಖಲಿಸಲು ಸೂಚನೆ: 

‘ಮಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಇಲ್ಲಿನ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಎರಡು ತಿಂಗಳ ನಂತರ ಮತ್ತೆ ಬಂದು, ವ್ಯವಸ್ಥೆ ಪರಿಶೀಲಿಸುತ್ತೇನೆ. ಸುಧಾರಣೆಯಾಗಿರದಿದ್ದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ’ ಎಂದು ಉಪಲೋಕಾಯುಕ್ತರು ಗುಡುಗಿದರು. 

‘ಆರು ತಿಂಗಳ ಹಿಂದೆ ₹84 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧವನ್ನು ರಾತ್ರೋರಾತ್ರಿ ಸೀಜ್‌ ಮಾಡಿದ್ದೆ. ಅದರ ಪ್ರಕರಣ ನಡೆಯುತ್ತಿದೆ. ಈಗ ನೋಡಿದರೆ ಮತ್ತೆ ಅವಧಿ ಮೀರಿದ ಔಷಧಗಳು ಪತ್ತೆಯಾಗಿವೆ. ಈ ಅವ್ಯವಸ್ಥೆ ನೋಡಿ ನನಗೆ ದಿಗ್ಭ್ರಮೆ ಆಗುತ್ತಿದೆ’ ಎಂದು ಉಪಲೋಕಾಯುಕ್ತರು ಬೇಸರ ವ್ಯಕ್ತಪಡಿಸಿದರು. 

ಅವಧಿ ಮೀರಿದ ಔಷಧ ಪತ್ತೆ!

ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭ ಮಿಮ್ಸ್‌ ಆಸ್ಪತ್ರೆಯ ಔಷಧಾಲಯದಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾದವು. ಇವುಗಳನ್ನು ಏಕೆ ಔಷಧಾಲಯದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಆಗ, ಮಿಮ್ಸ್‌ ವೈದ್ಯಕೀಯ ಅಧೀಕ್ಷಕ ಶಿವಕುಮಾರ್‌ ‘ಇವುಗಳನ್ನು ರೋಗಿಗಳಿಗೆ ಕೊಡುವುದಿಲ್ಲ. ಡಿಸ್‌ಪ್ಯಾಚ್‌ ಮಾಡಿಸಲು ಇಟ್ಟಿದ್ದೇವೆ’ ಎಂದು ಸಬೂಬು ಹೇಳಿದರು. ಇದಕ್ಕೆ ಉಪ ಲೋಕಾಯುಕ್ತರು ‘ಈ ಕೂಡಲೇ ಇವುಗಳನ್ನು ಕಸದ ಬುಟ್ಟಿಗೆ ಬಿಸಾಕಿ’ ಎಂದು ಗರಂ ಆದರು. 

ಹಾಳಾದ ಬ್ರೆಡ್‌

ಆಸ್ಪತ್ರೆ ಆವರಣದ ಕ್ಯಾಂಟೀನ್‌ನಲ್ಲಿ ಅವಧಿ ಮೀರಿದ ಬ್ರೆಡ್‌ ಬೂಸ್ಟ್‌ ಬಂದಿತ್ತು. ಇದನ್ನು ನೋಡಿದ ಉಪಲೋಕಾಯುಕ್ತರು, ‘ಇವುಗಳನ್ನು ತಿಂದರೆ ರೋಗಿಗಳ ಗತಿ ಏನಾಗಬೇಕು?. ಅಡುಗೆ ಕೋಣೆಯಲ್ಲಿ ಸ್ವಲ್ಪವೂ ಸ್ವಚ್ಛತೆಯಿಲ್ಲ. ಇಂಥ ಅನೈರ್ಮಲ್ಯ ವಾತಾವರಣದಲ್ಲಿ ತಯಾರಾದ ಆಹಾರವನ್ನು ಹೇಗೆ ರೋಗಿಗಳಿಗೆ ಕೊಡುತ್ತೀರಿ? ಎಂದು ಕ್ಯಾಂಟೀನ್‌ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು.

ಪಾರ್ಕಿಂಗ್‌ ಹೆಸರಿನಲ್ಲಿ ಸುಲಿಗೆ!

ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಬೈಕ್‌ ಪಾರ್ಕಿಂಗ್‌ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಜನರು ಉಪಲೋಕಾಯುಕ್ತರ ಬಳಿ ದೂರಿದರು. ಪಾರ್ಕಿಂಗ್‌ ನಿರ್ವಹಣೆಯ ಸಿಬ್ಬಂದಿ ಕರೆದು ವಿಚಾರಿಸಿದಾಗ, ರಸೀತಿ ಇಲ್ಲದೆ ಹಣ ಸಂಗ್ರಹ ಮಾಡುತ್ತಿದ್ದುದು ಗಮನಕ್ಕೆ ಬಂತು. ಇದರಿಂದ ಸಿಟ್ಟಾದ ಉಪಲೋಕಾಯುಕ್ತರು, ‘ಪಾರ್ಕಿಂಗ್‌ ಸ್ಥಳದಲ್ಲಿ ದರಪಟ್ಟಿ ಹಾಕದೇ ಜನರಿಂದ ಸುಲಿಗೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

8 ಗಂಟೆಯವರೆಗೆ ₹ 7 ರೂಪಾಯಿ ಮತ್ತು 12 ಗಂಟೆಯವರೆಗೆ ₹ 10 ರೂಪಾಯಿ ಮಾತ್ರ ತೆಗೆದುಕೊಳ್ಳಬೇಕು. ಇಂದೇ ದರಪಟ್ಟಿ ಹಾಕಿಸಬೇಕು. ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಟೆಂಡರ್‌ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

ಎಂಜಲು ಕಾಸು ತೆಗೆದುಕೊಳ್ಳಲು ನಾಚಿಕೆ ಆಗೋಲ್ವಾ?

ಆಸ್ಪತ್ರೆಯಲ್ಲಿ ಯಾವೊಂದು ವ್ಯವಸ್ಥೆಯೂ ಸರಿ ಇಲ್ಲ. ಮುಖ್ಯ ಆಡಳಿತಾಧಿಕಾರಿಯಾದ ನಿನ್ನ ಕೆಲಸವೇನು? ಆಂಬುಲೆನ್ಸ್‌ ಸೇವೆಗೆ ದುಪ್ಪಟ್ಟು ದರ, ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ, ಔಷಧಾಲಯದಲ್ಲಿ ಅವಧಿ ಮೀರಿದ ಔಷಧ, ಗಬ್ಬು ನಾರುವ ಶೌಚಾಲಯ, ಆಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ಗುತ್ತಲ ಕೆರೆಗೆ ಸೇರುತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ? ನಿಷ್ಠೆಯಿಂದ ಕೆಲಸ ಮಾಡು, ಇಲ್ಲದಿದ್ದರೆ ರಿಸೈನ್‌ ಮಾಡಿ ಮನೆಗೆ ಹೋಗು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಅವರು ಆಡಳಿತಾಧಿಕಾರಿ ಕೆ.ಜಾನ್‌ಸನ್‌ ಅವರನ್ನು ತರಾಟೆಗೆ ತೆಗೆದುಕೊಂಡರು. 

‘ಬಡವರಿಗೆ ಸೇವೆ ನೀಡಬೇಕಾದ ನೀವು, ಟೆಂಡರ್‌ದಾರರಿಂದ ಎಂಜಲು ಕಾಸು ತೆಗೆದುಕೊಳ್ಳಲು ನಾಚಿಕೆ ಆಗೋದಿಲ್ಲವೇ?’ ಎಂದು ಉಪಲೋಕಾಯುಕ್ತರು, ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ವಿರುದ್ಧ ಗರಂ ಆದರು. 

ಇಂಡವಾಳು, ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ತಾಲ್ಲೂಕು ಪಂಚಾಯಿತಿ ಕಚೇರಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಮೂರು ಕಚೇರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು ಮಾಡಿಸುವುದಾಗಿ ತಿಳಿಸಿದರು. 

3 ಕಚೇರಿಗಳ ವಿರುದ್ಧ ದೂರು ದಾಖಲು

ಇಂಡವಾಳು ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ತಾಲ್ಲೂಕು ಪಂಚಾಯಿತಿ ಕಚೇರಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಮೂರು ಕಚೇರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು ಮಾಡಿಸುವುದಾಗಿ ತಿಳಿಸಿದರು. 

ಮಿಮ್ಸ್‌ ಆಸ್ಪತ್ರೆ ಆವರಣದ ಕ್ಯಾಂಟೀನ್‌ನಲ್ಲಿ ಕಂಡುಬಂದ ಅವ್ಯವಸ್ಥೆ 
ಮಿಮ್ಸ್‌ ಆಸ್ಪತ್ರೆಯಲ್ಲಿ ಹಾಳಾಗಿರುವ ವಾಟರ್‌ ಫಿಲ್ಟರ್‌ 
ಆಸ್ಪತ್ರೆ ಆವರಣದಲ್ಲಿ ಸುರಿದಿದ್ದ ಕಸದ ರಾಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.