ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯ ತೋಟದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ಅವರ ಅಂತ್ಯಕ್ರಿಯೆ ಹಿಂದೂ ಧರ್ಮದ ಸಂಪ್ರದಾಯದಂತೆ ಭಾನುವಾರ ಸಂಜೆ ನಡೆಯಿತು.
ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಆಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಸಂಜೆ 4 ಗಂಟೆಗೆ ಮಾದನಾಯಕನಹಳ್ಳಿಗೆ ತರಲಾಯಿತು. ಗಣೇಶ್ ಅವರ ಇಚ್ಛೆಯಂತೆಯೇ ಅಕ್ಕನ ಊರಿನಲ್ಲೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
‘ಅಕ್ಕ ಗೌರಮ್ಮನವರ ಮಗಳು ಶೋಭಾ ಅವರನ್ನು ಗಣೇಶ್ ವಿವಾಹವಾಗಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಚನ್ನಪಟ್ಟಣ ತಾಲ್ಲೂಕಿನ ಮೊಗಳ್ಳಿ ಸ್ವಂತ ಊರಾದರೂ, ಇತ್ತೀಚಿನ ವರ್ಷಗಳಲ್ಲಿ ಅಕ್ಕನ ಊರಿಗೆ ಹೆಚ್ಚಾಗಿ ಬಂದು ಹೋಗುತ್ತಿದ್ದರು. ಅಕ್ಕನ ತೋಟದಲ್ಲಿ ಕುಳಿತು ಸಾಹಿತ್ಯ ರಚನೆ ಕೂಡ ಮಾಡಿದ್ದರು. ಹೀಗಾಗಿ ಮಾದನಾಯಕನಹಳ್ಳಿ ಕಾಲೊನಿ ಮೇಲೆ ವಿಶೇಷ ಪ್ರೀತಿಯಿತ್ತು’ ಎಂದು ಅವರ ಬಾಮೈದ ಮಂಜುನಾಥ್ ತಿಳಿಸಿದರು.
‘ಗಣೇಶ್ ಅವರು ಪ್ರಾಧ್ಯಾಪಕರಾಗುವ ಮುನ್ನ ಮಂಡ್ಯದಲ್ಲಿ ಕೆಲವು ವರ್ಷ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಸಣ್ಣ ಕತೆಗಳನ್ನು ಬರೆದಿದ್ದರು. ಸೃಜನಶೀಲ ಬರಹಗಾರರಾದ ಇವರ ‘ಬುಗುರಿ’ ಸಣ್ಣ ಕತೆ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರಕಟಗೊಂಡು, ಪ್ರಥಮ ಬಹುಮಾನವೂ ಲಭಿಸಿತ್ತು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ನೆನಪುಗಳನ್ನು ಮೆಲುಕು ಹಾಕಿದರು.
ಅಕ್ಕನ ಮನೆಯ ಮುಂದೆ ಒಂದೂವರೆ ತಾಸು ಗ್ರಾಮಸ್ಥರು ಮತ್ತು ಬಂಧುಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆ ನಂತರ ವಾಹನದಲ್ಲಿ ಮೆರವಣಿಗೆ ಮೂಲಕ ತೋಟಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.
ಅಂತ್ಯಕ್ರಿಯೆಯಲ್ಲಿ ಸಾಹಿತಿಗಳಾದ ಬಂಜೆಗೆರೆ ಜಯಪ್ರಕಾಶ್, ರಾಜಪ್ಪ ದಳವಾಯಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಎಸ್.ತುಕಾರಾಂ, ದೇವನೂರು ಬಸವರಾಜು, ಅಪ್ಪಗೆರೆ ವೆಂಕಟಯ್ಯ, ಚಾ.ನಂಜುಂಡಮೂರ್ತಿ, ಮೊಗಳ್ಳಿ ಗಣೇಶ್ ಅವರ ಪತ್ನಿ ಶೋಭಾ, ಪುತ್ರಿಯರಾದ ಚಂದನಾ, ವಂದನಾ, ಸಿರಿ, ಅಕ್ಕ ಗೌರಮ್ಮ, ಮಾವ ಪುಟ್ಟಸ್ವಾಮಿ ಹಾಗೂ ಶಿಷ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.