ADVERTISEMENT

ಮಂಡ್ಯದಲ್ಲಿ ಸಾಹಿತಿ ‘ಮೊಗಳ್ಳಿ ಗಣೇಶ್‌’ ಹೆಜ್ಜೆ ಗುರುತು

ಮಾದನಾಯಕನಹಳ್ಳಿ ಕಾಲೊನಿಯಲ್ಲಿ ಮಡುಗಟ್ಟಿದ ದುಃಖ

ಎಂ.ಆರ್.ಅಶೋಕ್ ಕುಮಾರ್
Published 6 ಅಕ್ಟೋಬರ್ 2025, 5:03 IST
Last Updated 6 ಅಕ್ಟೋಬರ್ 2025, 5:03 IST
<div class="paragraphs"><p>ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆಯಿತು </p></div>

ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆಯಿತು

   

– ಪ್ರಜಾವಾಣಿ ಚಿತ್ರ: ಸಂತೋಷ ಚಂದ್ರಮೂರ್ತಿ 

ಮದ್ದೂರು: ಸಾಹಿತಿ ಮೊಗಳ್ಳಿ ಗಣೇಶ್‌ ಅವರಿಗೂ ಮಂಡ್ಯ ಜಿಲ್ಲೆಗೂ ಅವಿನಾಭಾವ ಸಂಬಂಧ. ಅವರ ಪ್ರೀತಿಯ ಅಕ್ಕ ಗೌರಮ್ಮನವರ ಊರು ತಾಲ್ಲೂಕಿನ ಮಾದನಾಯಕನಹಳ್ಳಿ ಎಂದರೆ ವಿಶೇಷ ಅಕ್ಕರೆ.

ADVERTISEMENT

ಗಣೇಶ್‌ ಅವರು ಹಂಪಿ ವಿವಿಯಲ್ಲಿ ಪ್ರಾಧ್ಯಾಪಕರಾಗುವ ಮುನ್ನ ಮಂಡ್ಯ ನಗರದಲ್ಲಿ ಕೆಲವು ವರ್ಷ ಬಾಡಿಗೆ ಮನೆಯಲ್ಲಿದ್ದುಕೊಂಡು ಸಾಹಿತ್ಯ ಕೃಷಿ ಆರಂಭಿಸಿದ್ದರು. ಸಣ್ಣ ಕತೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನ ಗೆದ್ದಿದ್ದ ಇವರಿಗೆ ಮಂಡ್ಯದಲ್ಲಿ ಯುವ ಮತ್ತು ಹಿರಿಯ ಸಾಹಿತಿಗಳ ಒಡನಾಟ ಸಿಕ್ಕಿತ್ತು. 

‘ಮಾದನಾಯಕನಹಳ್ಳಿಯ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ಅವರು ಅನಾರೋಗ್ಯರಾದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯೇ ನಿಧನರಾದರೆ ತನ್ನಕ್ಕನ ತೋಟದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ಆಸೆ ಪಟ್ಟಿದ್ದರು. ಹೀಗಾಗಿಯೇ ಅವರ ಇಚ್ಛೆಯನ್ನು ನೆರವೇರಿಸಿದ್ದೇವೆ’ ಎಂದು ಕುಟುಂಬಸ್ಥರು ತಿಳಿಸಿದರು. 

‘ಅಕ್ಕನ ಮಗಳು ಶೋಭಾ ಅವರನ್ನು ವಿವಾಹವಾಗಿದ್ದ ಗಣೇಶ್‌ ಅವರು 6 ತಿಂಗಳ ಹಿಂದೆ ಮಾದನಾಯಕನಹಳ್ಳಿಗೆ ಹಬ್ಬದ ಸಂದರ್ಭದಲ್ಲಿ ಬಂದಿದ್ದರು. ಬಂದಾಗಲೆಲ್ಲಾ ಅಕ್ಕನ ತೆಂಗು ಹಾಗೂ ಬಾಳೆಯ ತೋಟಕ್ಕೆ ಹೋಗಿ ಪ್ರಕೃತಿಯ ಮಡಿಲಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡುವುದು ಅವರಿಗೆ ಇಷ್ಟದ ಸಂಗತಿಯಾಗಿತ್ತು’ ಎಂದು ಬಾಮೈದ ಮಂಜು ತಿಳಿಸಿದ್ದಾರೆ.

ಮಡುಗಟ್ಟಿದ ದುಃಖ: ‘ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಪಾರ್ಥಿವ ಶರೀರವನ್ನು ಅಕ್ಕನ ಊರಾದ ಮಾದನಾಯಕನಹಳ್ಳಿಗೆ ತರುತ್ತಿದ್ದಂತೆ ಗ್ರಾಮಸ್ಥರ ಕಣ್ಣಲ್ಲಿ ನೀರು ಜಿನುಗಿತು. ಕುಟುಂಬಸ್ಥರ ರೋದನ ಮುಗಿಲು ಮುಟ್ಟುವಂತಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಗಣೇಶ್‌ ಅವರು ‘ನಮ್ಮೂರಿನ ಅಳಿಯ’ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿತ್ತು. ಈಗ ಅವರನ್ನು ಕಳೆದುಕೊಂಡ ನಾವು ದುಃಖಿತರಾಗಿದ್ದೇವೆ’ ಎಂದು ಮಾದನಾಯಕನಹಳ್ಳಿ ಕಾಲೊನಿಯ ಮಹಿಳೆಯರು ಕಣ್ಣೀರು ಹಾಕಿದರು. 

ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ ಭಾನುವಾರ ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಚಿಂತಕ ಬಂಜೆಗೆರೆ ಜಯಪ್ರಕಾಶ್‌ ಪಡೆದರು 

ಮೂವತ್ತು ವರ್ಷಗಳ ಸ್ನೇಹ

ಗಣೇಶ್ ಮೊಗಳ್ಳಿ ಅವರೊಂದಿಗೆ ಸುಮಾರು ಮೂವತ್ತು ವರ್ಷಗಳಿಂದಲೂ ಸ್ನೇಹವಿತ್ತು. ಮಂಡ್ಯದ ವಿನೋಬಾ ರಸ್ತೆಯಲ್ಲಿ ಸುಮಾರು 2000ನೇ ಇಸವಿಯಲ್ಲಿ ಪುಸ್ತಕದ ಅಂಗಡಿಯನ್ನು ಮೊದಲ ಬಾರಿಗೆ ನಾನು ತೆರೆದಾಗ ಆಗ ಮಂಡ್ಯದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೊಗಳ್ಳಿ ಅವರು ಅಲ್ಲಿಗೆ ಹೆಚ್ಚಾಗಿ ಪುಸ್ತಕಗಳನ್ನು ಕೊಳ್ಳಲು ಬರುತ್ತಿದ್ದರು ಹಾಗೂ ಮೊಗಳ್ಳಿ ಅವರು ಉತ್ತಮ ಕತೆಗಾರರಾಗಿದ್ದರು. – ಎಂ.ಎಲ್‌. ಸೋಮವರದ ಚಿತ್ರ ಕಲಾವಿದ ಮಂಡ್ಯ

‘ಅಸಮಾನತೆ ವಿರುದ್ಧ ಮೊಗಳ್ಳಿ ಧ್ವನಿ’

ಸಾಹಿತಿ ಮೊಗಳ್ಳಿ ಗಣೇಶ್‌ ಅವರೊಂದಿಗೆ ಮಂಡ್ಯದಲ್ಲಿದ್ದಾಗಿನಿಂದಲೂ ಉತ್ತಮ ಸ್ನೇಹವಿತ್ತು. ನವ್ಯ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮೊಗಳ್ಳಿ ಅವರು ಅಸಮಾನತೆಯ ವಿರುದ್ಧ ತಮ್ಮ ಸಾಹಿತ್ಯಗಳಲ್ಲಿ ದನಿ ಎತ್ತಿದ್ದರು. ಸೃಜನಶೀಲ ಬರಹಗಾರನನ್ನು ಕಳೆದುಕೊಂಡ ಸಾಹಿತ್ಯ ಕ್ಷೇತ್ರ ಬಡವಾಗಿದೆ.  – ಹುಲ್‌ಕೆರೆ ಮಹದೇವು ನಿವೃತ್ತ ಕನ್ನಡ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.