ADVERTISEMENT

ಪಾಂಡವಪುರ: ಭಾವೈಕ್ಯತೆಯ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 13:42 IST
Last Updated 29 ಜುಲೈ 2023, 13:42 IST
ಪಾಂಡವಪುರ ಪಟ್ಟಣದಲ್ಲಿ ಮೊಹರಂ ಹಬ್ಬ (ಬಾಬಯ್ಯ) ಅಂಗವಾಗಿ ಆಶುರ್ ಖಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಇಮಾಂ ಹುಸೇನರ ಹಸ್ತುಗಳ ಬೆಳ್ಳಿಯ ಪ್ರತಿಕೃತಿಗೆ ಪೂಜೆ ಸಲ್ಲಿಸಲಾಯಿತು
ಪಾಂಡವಪುರ ಪಟ್ಟಣದಲ್ಲಿ ಮೊಹರಂ ಹಬ್ಬ (ಬಾಬಯ್ಯ) ಅಂಗವಾಗಿ ಆಶುರ್ ಖಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಇಮಾಂ ಹುಸೇನರ ಹಸ್ತುಗಳ ಬೆಳ್ಳಿಯ ಪ್ರತಿಕೃತಿಗೆ ಪೂಜೆ ಸಲ್ಲಿಸಲಾಯಿತು   

ಪಾಂಡವಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು (ಬಾಬಯ್ಯನ ಹಬ್ಬ) ಸರ್ವ ಧರ್ಮಿಯರು ಶ್ರದ್ದಾಭಕ್ತಿಯಿಂದ ಶನಿವಾರ ಆಚರಿಸಿದರು.

ಕಳೆದ 10 ದಿನದಿಂದ ಪಟ್ಟಣದಲ್ಲಿನ ಪೊಲೀಸ್ ಸ್ಟೇಷನ್ ರಸ್ತೆಯಲ್ಲಿನ ಆಶುರ್ ಖಾನದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಇಮಾಂ ಹುಸೇನರ ಹಸ್ತಗಳ ಬೆಳ್ಳಿಯ ಪ್ರತಿಕೃತಿಯನ್ನು ಹಿಂದೂ– ಮುಸಲ್ಮಾನರು ಧರ್ಮಾತೀತವಾಗಿ ಜನರು ಪೂಜಿಸಿದರು.

ಅರ್ಚಕ ಮೌಲ್ವಿ ಸದ್ದಾಮ್ ಅವರು ಪ್ಲಾಸ್ಟಿಕ್ ನವಿಲುಗರಿಗಳಿಂದ ಭಕ್ತರ ತಲೆ ಮೇಲೆ ಇಟ್ಟು ಆಶೀರ್ವಾದ ಮಾಡಿದರು. ಬಳಿಕ ಜರುಗಿದ ಧಾರ್ಮಿಕ ಮೆರವಣಿಗೆಯಲ್ಲಿ ನೂರಾರು ಹಿಂದೂ ಮುಸ್ಲಿಂರು ಪಾಲ್ಗೊಂಡು ತಮ್ಮ ಭಕ್ತಿಭಾವ ಮೆರೆದರು. ನಂತರ ವಿ.ಸಿ.ನಾಲೆಯಲ್ಲಿ ಬೆಳ್ಳಿಯ ಹಸ್ತಗಳನ್ನು ಮುಳುಗಿಸಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಆಶಿಕೆ ಮೌಲ ಸಮಿತಿ ಅಧ್ಯಕ್ಷ ಜಾವೀದ್ ಬಾಯ್, ‘ಮೊಹರಂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಇಮಾಂ ಹಸನ್ ಮತ್ತು ಇಮಾಂ ಹುಸೇನ್ ಅವರ ದುರಂತ ಕತೆಯನ್ನು ಆಧರಿಸಿದ್ದಾಗಿದೆ. ಇಸ್ಲಾಂ ಧರ್ಮವನ್ನು ಬೆಂಬಲಿಸಿದ ಈ ಇಬ್ಬರು ಯುವಕರ ಅಕಾಲಿಕ ಮರಣವನ್ನು ಸ್ಮರಿಸಲು, ಮೊಹರಂ ಆಚರಿಸಲಾಗುತ್ತದೆ. ಇದು ತ್ಯಾಗ ಬಲಿದಾನದ ಸಂಕೇತವಾಗಿದೆ. ಮೊಹರಂ ಹಬ್ಬದಲ್ಲಿ ಮುಸಲ್ಮಾನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅತ್ಯಂತ ಶಾಂತಿಯುತ ಜೀವವನ್ನು ನಡೆಸುತ್ತಾರೆ. ಇಮಾಂ ಹುಸೇನ್ ಅವರ ಸ್ಮರಣೆಯಿಂದ ದು:ಖಿತರಾಗಿ ದೇವರನ್ನು ಪ್ರಾರ್ಥಿಸುತ್ತಾರೆ’ ಎಂದು ಹೇಳಿದರು.

ಆಶಿಕೆ ಮೌಲ ಸಮಿತಿಯ ಉಪಾಧ್ಯಕ್ಷ ಬಾಬರ್, ಕಾರ್ಯದರ್ಶಿ ಪಹಾದ್ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.