
ಮಳವಳ್ಳಿ: ದೇಶ ಪ್ರಗತಿಯತ್ತ ಸಾಗಬೇಕಾದರೆ ಶಿಕ್ಷಣದ ಜೊತೆಗೆ ಉತ್ತಮ ಗುಣನಡತೆಯು ಮುಖ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾರೇಹಳ್ಳಿ ಬಳಿಯ ಬಿಜಿಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಮಂಗಳವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತು, ಸಂಯಮ, ಶ್ರದ್ಧೆ, ಭಕ್ತಿಯೊಂದಿಗೆ ಕಲಿಕೆಯು ಮಹತ್ವವಾಗಿದೆ. ವಿದ್ಯಾವಂತರು ಉನ್ನತ ಶಿಕ್ಷಣ ಪಡೆದವರಾಗಿದ್ದರೆ ಸಾಲದು ಅವನೊಬ್ಬ ಉತ್ತಮ ಗುಣನಡತೆ ಮತ್ತು ನೈತಿಕತೆ ಮೌಲ್ಯವುಳ್ಳ ವ್ಯಕ್ತಿ ಇರಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರ ಬಾಳಿಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಮಕ್ಕಳು ಗುರು ಹಿರಿಯರು ಮತ್ತು ಇತರರಲ್ಲಿ ನಯ ವಿನಯ ವಿಧೇಯತೆವುಳ್ಳ ಅಂಬಲರನ್ನು ರಕ್ಷಿಸುವ ದೇಶಭಕ್ತ ಸಂಸ್ಕಾರವಂತ ವ್ಯಕ್ತಿಗಳಾಗಿರಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜ್ಞಾವಂತ ನಾಗರಿಕರಾಗಿದ್ದು, ಅವರಲ್ಲಿನ ವ್ಯಕ್ತಿತ್ವ ಸಾಕರಗೊಳಿಸಲು ಶಿಕ್ಷಕರೊಂದಿಗೆ ಪೋಷಕರ ಪಾತ್ರವು ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಮುಖಂಡ ಕೆ.ಟಿ.ಶಿವರಾಮ್ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ವಿದ್ಯಾರ್ಥಿ ಜೀವನದಲ್ಲಿ ಪೋಷಕರಿಂದ ಪಡೆದ ಮಾನವೀಯ ಮೌಲ್ಯಗಳು ಜೀವನದಲ್ಲಿ ದಾರಿದೀಪವಾಗುತ್ತವೆ ಎಂದು ಹೇಳಿದರು.
ರಾಘವನಂದ ಸ್ವಾಮೀಜಿ, ಸಂವಿಧಾನಂದ ಸ್ವಾಮೀಜಿ, ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ನಾಗೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಚ್.ಕೆಂಪಯ್ಯ, ಮಾಜಿ ಉಪಾಧ್ಯಕ್ಷ ಬಸವರಾಜು, ಮಾಜಿ ಸದಸ್ಯರಾದ ಸಿದ್ದರಾಜು, ಬಸವರಾಜು, ಮುಖಂಡರಾದ ಚಿಕ್ಕಸಿನಕೆರೆ ಶಿವಲಿಂಗಯ್ಯ, ಶಿವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.