ADVERTISEMENT

ನಗರಸಭೆ ಅಧಿಕಾರ: ಆರಂಭವಾದ ಲೆಕ್ಕಾಚಾರ

ವಿಶ್ರಾಂತಿಗೆ ಮೊರೆ ಹೋದ ಅಭ್ಯರ್ಥಿಗಳು, ಫಲಿತಾಂಶದತ್ತ ಕಾರ್ಯಕರ್ತರ ಚಿತ್ತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 12:41 IST
Last Updated 1 ಸೆಪ್ಟೆಂಬರ್ 2018, 12:41 IST
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಗರಸಭೆ ಚುನಾವಣೆಯ ಮತಯಂತ್ರಗಳಿಗೆ ಭದ್ರತೆ ಒದಗಿಸಿರುವುದು
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಗರಸಭೆ ಚುನಾವಣೆಯ ಮತಯಂತ್ರಗಳಿಗೆ ಭದ್ರತೆ ಒದಗಿಸಿರುವುದು   

ಮಂಡ್ಯ: ನಗರಸಭೆ ಸೇರಿ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ಮತದಾನ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದ್ದು ಫಲಿತಾಂಶ ಸೆ.3ರಂದು ಬಹಿರಂಗವಾಗಲಿದೆ. ಈಗ ವಾರ್ಡ್‌ಗಳಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

ವಾರ್ಡ್‌ ಮೀಸಲಾತಿ, ಟಿಕೆಟ್‌ ಗೊಂದಲ, ಪಕ್ಷ ಬದಲಾವಣೆ, ನಾಮಪತ್ರ ಸಲ್ಲಿಕೆ, ಉಮೇದುವಾರಿಕೆ ವಾಪಸ್‌, ಪ್ರಚಾರ ಮುಂತಾದ ಕಾರಣಗಳಿಂದ ಒಂದು ತಿಂಗಳಿಂದ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಶನಿವಾರ ವಿಶ್ರಾಂತಿಗೆ ಜಾರಿದ್ದರು. ಶ್ರಾವಣ ಶನಿವಾರವಾದ ಕಾರಣ ಕೆಲವರು ದೇವಾಲಯಗಳಿಗೆ ಭೇಟಿ ಕೊಟ್ಟು ಗೆಲುವಿಗಾಗಿ ಪೂಜೆ ಸಲ್ಲಿಸಿದರು. ನಿರಂತರ ಕೆಲಸದಿಂದಾಗಿ ಕೆಲವರಿಗೆ ಮೈಕೈನೋವು, ಗಂಟಲು ಸಮಸ್ಯೆ, ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರು. ಇನ್ನೂ ಕೆಲವರು ಪಕ್ಷದ ಕಚೇರಿಗೆ ಭೇಟಿ ನೀಡಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದರು.

ಮಂಡ್ಯ ನಗರಸಭೆ ಸದಸ್ಯರ ಅವಧಿ ಸೆ.16ರಂದು ಕೊನೆಗೊಳ್ಳಲಿದೆ. ಸದ್ಯ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದು ಮುಂದೆ ನಗರಸಭೆ ಅಧಿಕಾರ ಯಾವ ಪಕ್ಷದ ಪಾಲಾಗಲಿದೆ ಎಂಬುದು ಸೋಮವಾರ ತಿಳಿಯಲಿದೆ. ಈ ಕುರಿತ ಲೆಕ್ಕಾಚಾರ ಆರಂಭವಾಗಿದ್ದು ಕಾರ್ಯಕರ್ತರ ಚರ್ಚೆಯ ವಿಷಯವಾಗಿದೆ. ಸ್ಥಳೀಯ ಶಾಸಕರು ಜೆಡಿಎಸ್‌ ಪಕ್ಷದವರಾದ ಕಾರಣ ಜೆಡಿಎಸ್‌, ನಗರಸಭೆ ಅಧಿಕಾರ ಹಿಡಿಯುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಮುಖಂಡರು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಕಳೆದ ಐದು ವರ್ಷಗಳಿಂದ ಉತ್ತಮ ಕೆಲಸ ಮಾಡಿದ್ದು ಮತ್ತೆ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ADVERTISEMENT

‘ನಗರಸಭೆ ಆಡಳಿತದ ವಿಷಯದಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಲಿದೆ. ಈ ಬಾರಿ ಬಿಜೆಪಿಯ ರಾಜ್ಯ ಮಟ್ಟದ ಮುಖಂಡರು ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ್ದಾರೆ. ಜನರು ಕಾಂಗ್ರೆಸ್‌–ಜೆಡಿಎಸ್‌ ತಿರಸ್ಕಾರ ಮಾಡಿ ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಾರಿ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಮತ ಎಣಿಕೆಗೆ ಸಿದ್ಧತೆ:ನಗರಸಭೆ ಚುನಾವಣೆಯ ಎಲ್ಲಾ 119 ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರಗಳನ್ನು ಸರ್ಕಾರಿ ಮಹಾವಿದ್ಯಾಲಯದಲ್ಲಿ ತೆರೆಯಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೆ.3ರಂದು ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.