ADVERTISEMENT

ಮುನಿರತ್ನ ಗೆಲುವು ನಿರೀಕ್ಷಿತ: ಸುಮಲತಾ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 12:48 IST
Last Updated 10 ನವೆಂಬರ್ 2020, 12:48 IST
ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ, ರೂ.4.10 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಎ. ಸುಮಲತಾ ಮಂಗಳವಾರ ಭೂಮಿಪೂಜೆ ನೆರವೇರಿಸಿದರು
ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ, ರೂ.4.10 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಎ. ಸುಮಲತಾ ಮಂಗಳವಾರ ಭೂಮಿಪೂಜೆ ನೆರವೇರಿಸಿದರು   

ಶ್ರೀರಂಗಪಟ್ಟಣ: ‘ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಗೆಲುವು ನಿರೀಕ್ಷಿತ’ ಎಂದು ಸಂಸದೆ ಎ. ಸುಮಲತಾ ಹೇಳಿದರು.

ತಾಲ್ಲೂಕಿನ ಗಣಂಗೂರು ಗ್ರಾಮದಲ್ಲಿ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ₹4.10 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮುನಿರತ್ನ ಹಲವು ವರ್ಷಗಳಿಂದ ಆ ಕ್ಷೇತ್ರದ ಜನರ ಕೆಲಸ ಮಾಡಿಕೊಟ್ಟಿದ್ದಾರೆ. ಚುನಾವಣೆಯ ಫಲಿತಾಂಶ ಪಕ್ಷದ ಜತೆಗೆ ಅಭ್ಯರ್ಥಿ ವ್ಯಕ್ತಿತ್ವ ಎಂತಹದ್ದು ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಮುನಿರತ್ನ ಅವರನ್ನು ಸೋಲಿಸಬೇಕು ಎಂದು ಕೆಲವರು ಸುಳ್ಳು ಆಪಾದನೆ ಮಾಡಿದರು. ಆದರೂ ಜನರಿಗೋಸ್ಕರ ಅವಿರತವಾಗಿ ದುಡಿದಿದ್ದ ಕಾರಣ ಅವರು ಸುಲಭವಾಗಿ ಗೆದ್ದು ಬಂದಿದ್ದಾರೆ’ ಎಂದರು.

ADVERTISEMENT

ಶ್ರೀರಂಗಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಇಲ್ಲದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆ ಪಕ್ಷದಿಂದ ಯಾರೂ ಸ್ಪರ್ಧಿಸಲಿಲ್ಲ. ಹಾಗಾಗಿ ನನ್ನ ಮತದ ಅಗತ್ಯ ಇರಲಿಲ್ಲ. ನನ್ನನ್ನು ಯಾರೂ ಕರೆಯಲೂ ಇಲ್ಲ ಎಂದು ಪ್ರಶ್ನೆಯೊದಕ್ಕೆ ಅವರು ಉತ್ತರಿಸಿದರು.

ಸ್ಥಳೀಯ ಚುನಾವಣೆ ಬಗ್ಗೆ ಇದುವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮುಖಂಡರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಮುಖಂಡರಾದ ಇಂಡುವಾಳು ಸಚ್ಚಿದಾನಂದ, ದರ್ಶನ್‌ ಲಿಂಗರಾಜು, ತಹಶೀಲ್ದಾರ್‌ ಎಂ.ವಿ. ರೂಪಾ, ತಾ.ಪಂ. ಮಾಜಿ ಸದಸ್ಯ ಕೃಷ್ಣಕುಮಾರ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ಬೀರೇಶ, ಶಿವನಂಜು, ಗುತ್ತಿಗೆದಾರ ಎಂ. ರಾಮಕೃಷ್ಣ, ಮಹೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.