ADVERTISEMENT

ಮಹಿಳೆಯ ಕೊಲೆ: ಆರೋಪಿಗಳ ಸೆರೆ

ಫೆ.2ರಂದು ಮದ್ದೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 2:16 IST
Last Updated 9 ಫೆಬ್ರುವರಿ 2021, 2:16 IST
ವಶಪಡಿಸಿಕೊಳ್ಳಲಾದ ಚಿನ್ನದ ಒಡವೆ, ನಗದು
ವಶಪಡಿಸಿಕೊಳ್ಳಲಾದ ಚಿನ್ನದ ಒಡವೆ, ನಗದು   

ಮದ್ದೂರು: ಪಟ್ಟಣದಲ್ಲಿ ಈಚೆಗೆ ನಡೆದ ಮಹಿಳೆಯೊಬ್ಬರ ಕೊಲೆಗೆ ಸಂಬಂಧಿಸಿ ಪಟ್ಟಣದ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಪಟ್ಟಣದ ವಿಶ್ವೇಶ್ವರಯ್ಯ ನಗರದ 9ನೇ ಕ್ರಾಸ್‌ನಲ್ಲಿ ವಾಸವಿದ್ದ ಪೂರ್ಣಿಮಾ ಅವರನ್ನು ಫೆ.2ರಂದು ಅತ್ಯಾಚಾರ ಮಾಡಿ ಬೆಡ್‌ಶೀಟ್‌ನಿಂದ ಕುತ್ತಿಗೆ ಬಿಗಿದು, ಉಸಿರು ಕಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧನಂಜಯ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿನಾರಾಯಣಪ್ರಸಾದ್‌ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಸಿಪಿಐ ಕೆ.ಆರ್.ಪ್ರಸಾದ್ ನೇತೃತ್ವದ ತಂಡವು ಫೆ.7ರಂದು ಇಬ್ಬರು ಆರೋಪಿಗಳನ್ನ ಬಂಧಿಸಿದೆ.

ADVERTISEMENT

ರಾಮನಗರ ತಾಲ್ಲೂಕು ಕೂಟ್ಕಲ್ ಹೋಬಳಿ ರಾಯರದೊಡ್ಡಿ (ಸ್ವಂತ ಊರು ಹೊಂಬೇಗೌಡನದೊಡ್ಡಿ)ಗ್ರಾಮದ ಎಚ್.ಆರ್.ಮನು ಅಲಿಯಾಸ್ ಮನು (23), ಕೂಟ್ಕಲ್ ಹೋಬಳಿಯ ಹೊಂಬೇಗೌಡನದೊಡ್ಡಿ ಗ್ರಾಮದ ಸಿ.ರಮೇಶ್ (29) ಬಂಧಿತರು.

ಘಟನೆ ವಿವರ: ಪೂರ್ಣಿಮಾ ಅವರಲ್ಲಿದ್ದ ಒಡವೆ ಮತ್ತು ಹಣ ದೋಚುವ ಸಲುವಾಗಿ ಹಾಗೂ ಮೃತ ಮಹಿಳೆ ಜತೆಗೆ ದೈಹಿಕ ಸಂಪರ್ಕ ಮಾಡುವ ನೆಪದಲ್ಲಿ ಸ್ನೇಹಿತ ರಮೇಶನ ಜತೆ ಆರೋಪಿ ಮನುಕುಮಾರ್ ತೆರಳಿದ್ದ. ದೈಹಿಕ ಸಂಪರ್ಕ ನಡೆಸಿ ಬಾಯಿಗೆ
ಬಟ್ಟೆ ತುರುಕಿ, ಆಕೆಯ ಕಾಲುಗಳನ್ನು ಮಂಚಕ್ಕೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಬಳಿಕ ಚಿನ್ನದ ಮಾಂಗಲ್ಯ, ರೋಲ್ಡ್‌ಗೋಲ್ಡ್‌ ಸರ, 4 ರೋಲ್ಡ್‌ಗೋಲ್ಡ್‌ ಬಳೆ, ಮೊಬೈಲ್, ₹ 4500 ಕಿತ್ತುಕೊಂಡು ಪರಾರಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.

ಆರೋಪಿಗಳು ಕಿತ್ತುಕೊಂಡು ಹೋಗಿರುವ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿರುವ ಮೋಟಾರ್ ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.