ADVERTISEMENT

ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಕಚೇರಿಗೆ ಮುತ್ತಿಗೆ

ಇ– ಮತದಾನ, ಆನ್‌ಲೈನ್‌ ಸರ್ವಸದಸ್ಯರ ಸಭೆ ರದ್ದು ಮಾಡುವಂತೆ ಹಿತರಕ್ಷಣಾ ಸಮಿತಿ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 5:17 IST
Last Updated 18 ಏಪ್ರಿಲ್ 2021, 5:17 IST
ಇ– ಮತದಾನ, ಆನ್‌ಲೈನ್‌ ಸರ್ವಸದಸ್ಯರ ಸಭೆ ರದ್ದು ಮಾಡುವಂತೆ ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮೈಷುಗರ್‌ ಅಧ್ಯಕ್ಷ ಶಿವಲಿಂಗೇಗೌಡ ಅವರಿಗೆ ಮನವಿ ಸಲ್ಲಿಸಿದರು
ಇ– ಮತದಾನ, ಆನ್‌ಲೈನ್‌ ಸರ್ವಸದಸ್ಯರ ಸಭೆ ರದ್ದು ಮಾಡುವಂತೆ ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮೈಷುಗರ್‌ ಅಧ್ಯಕ್ಷ ಶಿವಲಿಂಗೇಗೌಡ ಅವರಿಗೆ ಮನವಿ ಸಲ್ಲಿಸಿದರು   

ಮಂಡ್ಯ: ಐತಿಹಾಸಿಕ ಮೈಷುಗರ್‌ ಕಾರ್ಖಾನೆಯನ್ನು ಖಾಸಗೀ ಕರಣಗೊಳಿಸುವ ಹುನ್ನಾರದಿಂದ ಇ–ಮತದಾನ, ಆನ್‌ಲೈನ್‌ ಸರ್ವಸದಸ್ಯರ ಸಭೆ ಆಯೋಜಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಶನಿವಾರ ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ ಅವರ ಕಚೇರಿಗೆ ಮುತ್ತಿಗೆ ಹಾಕಿದರು.

ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯುವ ಉದ್ದೇಶದಿಂದ ಇ–ಮತದಾನ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಏ.25ರಿಂದ ಏ.27ರವರೆಗೆ ಮತದಾನ ಪ್ರಕ್ರಿಯೆ ನಿಗದಿ ಮಾಡಲಾಗಿದೆ. ಜೊತೆಗೆ ಏ.28ರಂದು ಸರ್ವಸದಸ್ಯರ ಸಾಮಾನ್ಯ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಸರ್ಕಾರದ ಉದ್ದೇಶ ಖಾಸಗೀಕರಣವೇ ಆಗಿರುವ ಕಾರಣ ಸಭೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ವತಿಯಿಂದ ನೋಟಿಸ್‌ ನೀಡಿರುವ ಪತ್ರದಲ್ಲೇ ಸಾಕಷ್ಟು ಗೊಂದಲಗಳು ಇವೆ. ಅದರಲ್ಲಿ ಯಾರ ಸಹಿಯೂ ಇಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ‘ರೈತರು ಒ ಅಂಡ್‌ ಎಂ ಮಾಡಲು ಒಪ್ಪದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ನೋಟಿಸ್‌ನಲ್ಲಿ ನಮೂದಿಸಿರುವುದು 40 ವರ್ಷಗಳವರೆಗೆ ಗುತ್ತಿಗೆ ನೀಡುವ ಉದ್ದೇಶವೇ ಅಡಗಿದೆ ಎಂದು ಆರೋಪಿಸಿದರು.

ADVERTISEMENT

ಷೇರುದಾರರಿಗೆ ನೀಡಿರುವ ನೋಟಿಸ್‌ನಲ್ಲಿ ‘ವಿಶೇಷ ವ್ಯಾಪಾರ– ವ್ಯವಹಾರದ ಸಭೆ’ ಎಂದು ತಿಳಿಸಲಾಗಿದೆ. ಇದರ ಅರ್ಥ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದೇ ಆಗಿದೆ. ಆನ್‌ಲೈನ್‌ನಲ್ಲಿ ಸಭೆ ನಡೆಸಿ ಖಾಸಗೀಕರಣಕ್ಕೆ ರೈತರಿಂದ ಅನುಮತಿ ಪಡೆಯುವ ಷಡ್ಯಂತ್ರ ರೂಪಿಸಲಾಗಿದೆ. ಅಧ್ಯಕ್ಷರ ಗಮನಕ್ಕೆ ಬಾರದೇ ಇಷ್ಟೆಲ್ಲಾ ಬೆಳವಣಿಗೆ ನಡೆಯಲು ಸಾಧ್ಯವಿಲ್ಲ. ಯಾವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಕಳೆದ ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ರೈತರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಏಕಾಏಕಿ ವ್ಯವಹಾರದ ಸಭೆ ಕರೆಯುವ ಮೂಲಕ ರೈತರಿಗೆ ದ್ರೋಹ ಎಸಗಿದ್ದಾರೆ. ಕಾರ್ಖಾನೆ ಈಗಲೂ ಸುಸಜ್ಜಿತವಾಗಿದ್ದು, ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು. ಖಾಸಗೀಕರಣಗೊಳಿಸಲು ಯಾವುದೇ ಕಾರಣಕ್ಕೂ ರೈತರು ಬಿಡುವುದಿಲ್ಲ ಎಂದು ಆರೋಪಿಸಿದರು.

ಈಚೆಗೆ ಕಾರ್ಖಾನೆಯಲ್ಲಿ ತಿಂಗಳಿಗೊಂದು ಸಭೆ ನಡೆಸಿರುವ ಮಾಹಿತಿಯನ್ನು ನೋಟಿಸ್‌ನಲ್ಲಿ ನಮೂದಿಸಲಾಗದೆ. ಆದರೆ, ಸಭೆಯಲ್ಲಿ ಕೈಗೊಂಡ ನಿರ್ಣಯ, ಚರ್ಚಿಸಿದ ವಿಚಾರಗಳ ಕುರಿತು ಯಾವುದೇ ನಡಾವಳಿ ಇಲ್ಲ. ರೈತರನ್ನು, ಕಬ್ಬು ಬೆಳೆಗಾರರನ್ನು ತಪ್ಪುದಾರಿಗೆ ಎಳೆದು ಖಾಸಗಿ ಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ. ಕಾರ್ಖಾನೆಯಲ್ಲಿ ಶೇ 3ರಷ್ಟು ಮಾತ್ರ ರೈತರಿದ್ದಾರೆ. ಶೇ 97ರಷ್ಟು ಷೇರು ಸರ್ಕಾರದ ಬಳಿಯೇ ಇವೆ. ಹೀಗಾಗಿ ಸುಲಭವಾಗಿ ಖಾಸಗೀಕರಣಗೊಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.

ಈ ಕುರಿತು ಸಕ್ಕರೆ ಸಚಿವರಿಂದ ಭರವಸೆ ಕೊಡಿಸುವವರೆಗೂ ಕಚೇರಿ ಬಿಟ್ಟು ಕದಲುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ನಂತರ ಶಿವಲಿಂಗೇಗೌಡ ಮಾತನಾಡಿ, ಸಕ್ಕರೆ ಸಚಿವರು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಆನ್‌ಲೈನ್‌ ಸಭೆ ಕುರಿತು ಸ್ಪಷ್ಟನೆ ನೀಡಲಾಗುವುದು ಎಂದರು.

ಸೋಮವಾರದೊಳಗೆ ಸ್ಪಷ್ಟ ಮಾಹಿತಿ ದೊರಕಬೇಕು, ಇಲ್ಲದಿದ್ದರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ನಾಯಕರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಕೆ.ಎಸ್‌.ಸುಧೀಕರ್‌ ಕುಮಾರ್‌, ರಾಮಲಿಂಗೇಗೌಡ, ಮುದ್ದೇ ಗೌಡ, ಬೋರಾಪುರ ಶಂಕರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.