ADVERTISEMENT

ಮಂಡ್ಯ: ಮೈಷುಗರ್‌ ಗುತ್ತಿಗೆ ಟೆಂಡರ್‌ ಪ್ರಕ್ರಿಯೆ ರದ್ದತಿಗೆ ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಬಳಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:00 IST
Last Updated 24 ಜೂನ್ 2021, 6:00 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಮಂಡ್ಯ: ಮೈಷುಗರ್‌ ಕಾರ್ಖಾನೆ ಗುತ್ತಿಗೆ ಟೆಂಡರ್‌ ಪ್ರಕ್ರಿಯೆ ರದ್ದು ಮಾಡಿ, ಸರ್ಕಾರಿ ಸ್ವಾಮ್ಯದಲ್ಲಿ ಕಬ್ಬು ನುರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಮೈಷುಗರ್‌ ಕಾರ್ಖಾನೆಯನ್ನು 40 ವರ್ಷಗಳಿಗೆ ಗುತ್ತಿಗೆ ನೀಡುವ ಸಂಬಂಧ ವಿಧಾನ ಪರಿಷತ್‌ನಲ್ಲಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕ್ಕರೆ ಸಚಿವರು ಪುನರ್‌ ಪರಿಶೀಲಿಸಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದಾರೆ. ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಆರಂಭಿಸಲು ಹಣವನ್ನು ಬಜೆಟ್‌ನಲ್ಲಿ ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಲುವಾಗಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭ ಮಾಡಲು ಹವಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ನಷ್ಟವಿಲ್ಲದೆ ಸುಸ್ಥಿತಿಯಲ್ಲಿ ಇದೆ. ಕಾರ್ಖಾನೆಯನ್ನು 40 ವರ್ಷಕ್ಕೆ ಗುತ್ತಿಗೆ ನೀಡಲು ಹಠಕ್ಕೆ ಬಿದ್ದು, ಸರ್ಕಾರ ಉದ್ದೇಶ ಪೂರ್ವಕವಾಗಿ ಕಬ್ಬು ನುರಿಸುವ ನುರಿಸುವುದನ್ನು ನಿಲ್ಲಿಸಿದೆ. ಕಾರ್ಖಾನೆಯಲ್ಲಿ ಇರುವ ಕೋಟ್ಯಂತರ ರೂಪಾಯಿ ಆಸ್ತಿಗಳನ್ನು ಕಬಳಿಸುವ ಉದ್ದೇಶದಿಂದ ನಷ್ಟವಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ರೈತರನ್ನು ದಿಕ್ಕು ತಪ್ಪಿಸಿ ಗುತ್ತಿಗೆ ನೀಡುವ ವ್ಯವಸ್ಥಿತ ಸಂಚನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಮನ್‌ಮುಲ್‌ನಲ್ಲಿ ದಶಕಗಳಿಂದೀಚೆಗೆ ನಡೆದಿರುವ 10–15 ಹಗರಣಗಳಲ್ಲಿ ಅಂದಾಜು ₹300 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಇದನ್ನು ಉನ್ನತ ಮಟ್ಟದ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಒಕ್ಕೂಟಕ್ಕೆ ಆಗಿರುವ ನಷ್ಟವನ್ನು ಅವರಿಂದ ಭರಿಸಬೇಕು. ಇದನ್ನು ಮಾಡದೆ ಸರ್ಕಾರ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಕೆಆರ್‌ಎಸ್‌ ಅಣೆಕಟ್ಟೆ ಸುತ್ತಾ ಮುತ್ತಾ ಗಣಿಗಾರಿಕೆ ನಡೆಯುತ್ತಿದ್ದು, ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ. ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಅಣೆಕಟ್ಟೆಯ ಸುರಕ್ಷತೆ ಪರಿಶೀಲಿಸಿ ಸುರಕ್ಷತೆಯನ್ನು ಸರ್ಕಾರ ದೃಢೀಕರಿಸಬೇಕು. ಕಾವೇರಿ ನದಿ ನೀರಿನ ಸಂಬಂಧ ತಮಿಳುನಾಡು ರಾಜ್ಯ, ಕೇಂದ್ರ ಸರ್ಕಾರ ಧೋರಣೆಯಿಂದ ಕರ್ನಾಟಕ ರಾಜ್ಯದ ಕಾವೇರಿ ನದಿ ನೀರು ಯೋಜನೆಗೆ ಅಡಚಣೆ ಉಂಟಾಗುತ್ತಿದೆ. ಕೇಂದ್ರದ ಈ ಧೋರಣೆಯಿಂದ ಒಕ್ಕೂಟ ವ್ಯವಸ್ಥೆ ಹಾಳಾಗುತ್ತಿದೆ. ಕೂಡಲೇ ಮೇಕೆದಾಟು, ಹೊಗೇನಕಲ್‌ ಯೋಜನೆಗಳೊಂದಿಗೆ ಆರ್ಥಿಕ ಸೌಲಭ್ಯ ಒದಗಿಸಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪದಾಧಿಕಾರಿಗಳಾದ ಎಂ.ಬಿ.ಶ್ರೀನಿವಾಸ್‌, ಸಿ.ಕುಮಾರಿ, ಟಿ.ಎಲ್‌.ಕೃಷ್ಣೇಗೌಡ, ಇಂಡುವಾಳು ಚಂದ್ರಶೇಖರ್‌, ಸುಧೀರ್‌ಕುಮಾರ್‌, ಬೋರಲಿಂಗೇಗೌಡ, ದೇವಿ, ಎಂ.ಪುಟ್ಟಮಾದು, ಕಿರಂಗೂರು ಪಾಪು, ಕೃಷ್ಣ ಪ್ರಕಾಶ್‌, ಜನಾರ್ದನ್‌, ಸುಶೀಲಾ, ಬೊಮ್ಮೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.