ಸುನಂದಾ ಜಯರಾಂ
ಮಂಡ್ಯ: ‘ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ (ಮೈಷುಗರ್) 2021ರಿಂದ ಇಲ್ಲಿಯವರೆಗೆ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುವುದನ್ನು ಸ್ವಾಗತಿಸುತ್ತೇವೆ. ಆದರೆ, ತನಿಖೆಯ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿರುವ ಶಂಕೆಯಿದೆ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಹೇಳಿದರು.
ಮೈಷುಗರ್ ಸ್ಥಿತಿಗತಿ ಸಂಬಂಧ ಸಚಿವರು, ಜಿಲ್ಲೆಯ ಶಾಸಕರು ಇದುವರೆಗೆ ಸಭೆ ನಡೆಸಿಲ್ಲ. ಆದರೆ, ತರಾತುರಿಯಲ್ಲಿ ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಮೈಷುಗರ್ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ‘ತುರ್ತು ಸಭೆ’ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ಖಾನೆ ನಷ್ಟದಲ್ಲಿದೆ ಎಂಬುದನ್ನು ತನಿಖಾ ವರದಿಯಲ್ಲಿ ಬಿಂಬಿಸಿ, ಸರ್ಕಾರಿ ಸ್ವಾಮ್ಯದಿಂದ ಖಾಸಗಿಯವರಿಗೆ ಗುತ್ತಿಗೆ ನೀಡುವ ಅನುಮಾನ ವ್ಯಕ್ತವಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಡಳಿತ ಮಂಡಳಿಯಲ್ಲಿರುವ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರನ್ನು ಹೊರಗಿಟ್ಟಾಗ ಮಾತ್ರ ಪಾರದರ್ಶಕ ತನಿಖೆ ನಡೆಸಲು ಸಾಧ್ಯವಾಗುತ್ತದೆ. ನಾಗರಾಜಪ್ಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ಅವ್ಯವಹಾರದಿಂದ ₹127 ಕೋಟಿ ನಷ್ಟ ಉಂಟಾಗಿರುವುದು ಸಾಬೀತಾಗಿದ್ದು, ಕೂಡಲೇ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ 25 ವರ್ಷಗಳಿಂದ ಮೈಷುಗರ್ ಕಾರ್ಖಾನೆ ಸರಿಯಾಗಿ ನಡೆಯದಿರುವುದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ಕಾರ್ಖಾನೆಯ ಸಾರ್ವಜನಿಕ ಲೆಕ್ಕ ಪರಿಶೋಧನೆ ಸಮಿತಿ ಸಭೆ ಮಾಡದೇ ₹600 ಕೋಟಿ ಲೂಟಿ ಆಗಿದೆ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಜಿ.ಬಿ. ಶಿವಕುಮಾರ್, ಹಿರಿಯ ಉಪಾಧ್ಯಕ್ಷ ಕೆ. ಬೋರಯ್ಯ, ಎಂ.ಬಿ. ನಾಗಣ್ಣಗೌಡ, ಎಸ್.ನಾರಾಯಣ್, ಎಚ್.ಸಿ. ಮಂಜುನಾಥ್, ಕೃಷ್ಣ, ಬಸವರಾಜು ಇದ್ದರು.