ADVERTISEMENT

ನಾಗಮಂಗಲ: ‘ಮುಳುಕಟ್ಟೆ’ ಕ್ಷೇತ್ರದಲ್ಲಿ ಸಮಸ್ಯೆಗಳ ಮುಳ್ಳು 

ಉಲ್ಲಾಸ್.ಯು.ವಿ
Published 23 ಜೂನ್ 2025, 6:17 IST
Last Updated 23 ಜೂನ್ 2025, 6:17 IST
ನಾಗಮಂಗಲ ತಾಲ್ಲೂಕಿನ ಮುಳುಕಟ್ಟಮ್ಮ ದೇವಾಲಯದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಯಾತ್ರಾ ನಿವಾಸ ಪಾಳು ಬಿದ್ದಿದೆ
ನಾಗಮಂಗಲ ತಾಲ್ಲೂಕಿನ ಮುಳುಕಟ್ಟಮ್ಮ ದೇವಾಲಯದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಯಾತ್ರಾ ನಿವಾಸ ಪಾಳು ಬಿದ್ದಿದೆ   

ನಾಗಮಂಗಲ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮುಳುಕಟ್ಟಮ್ಮ(ಮುಳುಕಟ್ಟೆ) ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಕೋಟ್ಯಂತರ ರೂಪಾಯಿ ಆದಾಯ ದೇವಾಲಯದಿಂದ ಸರ್ಕಾರಕ್ಕೆ ಬರುತ್ತಿದೆ. ಆದರೆ, ಇಲ್ಲಿ ಮೂಲಸೌಕರ್ಯಗಳಿಲ್ಲದೆ ಭಕ್ತರು ಪರದಾಡುವಂತಾಗಿದೆ. 

ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಕುಡಿಯುವ ನೀರನ್ನು ಭಕ್ತರು ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ದುಃಸ್ಥಿತಿ ಇದೆ. ಇರುವ ಒಂದು ಶೌಚಾಲಯವೂ ಸಮರ್ಪಕ ನಿರ್ವಹಣೆಯಿಲ್ಲದೇ ಪಾಳುಬಿದ್ದಿರುವುದರಿಂದ ಭಕ್ತರು ಪರಿತಪಿಸುವಂತಾಗಿದೆ.  

ಮಹಿಳೆಯರು ಶೌಚಾಲಯಕ್ಕೆ ಹೋಗಬೇಕೆಂದರೆ ಕಿ.ಮೀ.ಗಟ್ಟಲೆ ದೂರದ ಬಯಲು ಪ್ರದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ದೇವಾಲಯದ ಆವರಣದಲ್ಲಿ ಶುಚಿತ್ವವು ಮಾಯವಾಗಿದೆ. ಎಲ್ಲಿ ನೋಡಿದರೂ ತ್ಯಾಜ್ಯದ ರಾಶಿಯು ದುರ್ವಾಸನೆ ಬೀರುತ್ತಿದೆ. 

ADVERTISEMENT

‘ಭಕ್ತರ ಭದ್ರತೆ ದೃಷ್ಟಿಯಿಂದಲೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮೂಲಸೌಲಭ್ಯ ಕಲ್ಪಿಸದ ತಾಲ್ಲೂಕು ಆಡಳಿತಕ್ಕೆ ಭಕ್ತರು ಹಿಡಿಶಾಪ ಹಾಕುತ್ತಿದ್ದು ಇನ್ನಾದರೂ ಸೌಲಭ್ಯ ಕಲ್ಪಿಸುವತ್ತ ಅಧಿಕಾರಿಗಳು ಗಮನಹರಿಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಹುಂಡಿ ಎಣಿಕೆಗೆ ಸೀಮಿತ: ಮುಳುಕಟ್ಟೆ ದೇವಾಲಯದ ನಿರ್ವಹಣೆ ಮತ್ತು ಆದಾಯ ಎಲ್ಲವನ್ನೂ ಮೊದಲು ‘ಮುಳುಕಟ್ಟಮ್ಮ ದೇವಾಲಯದ ಟ್ರಸ್ಟ್’ ನೋಡಿಕೊಳ್ಳುತ್ತಿತ್ತು. ಕೆಲವು ವರ್ಷಗಳ ಹಿಂದೆ ಅರ್ಚಕರು ಮತ್ತು ಟ್ರಸ್ಟ್ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಸರ್ಕಾರ ಮಧ್ಯಪ್ರವೇಶಿಸಿ ದೇವಾಲಯದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಕೆಲ ತಿಂಗಳು ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು ಮತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸಿಕೊಂಡು ಆಡಳಿತ ನಡೆಸಿತು. ಆದರೆ ಈಗ ಕೇವಲ ಹುಂಡಿ ಹಣ ಎಣಿಕೆ ಮಾಡಿಕೊಳ್ಳುವುದಕ್ಕೆ ಮಾತ್ರ ತಾಲ್ಲೂಕು ಆಡಳಿತ ಸೀಮಿತವಾಗಿದೆ. ದೇವಾಲಯಕ್ಕೆ ಬರುವ ಕೋಟ್ಯಂತರ ರೂಪಾಯಿ ಆದಾಯವನ್ನು ತೆಗೆದುಕೊಂಡು ಹೋಗುತ್ತಿರುವ ತಾಲ್ಲೂಕು ಆಡಳಿತ ಸೌಲಭ್ಯಗಳನ್ನು ಕಲ್ಪಿಸಲಿ ಎಂಬುದು ಭಕ್ತರ ಆಗ್ರಹವಾಗಿದೆ.

ಮುಳುಕಟ್ಟಮ್ಮ ದೇವಾಲಯದ ಸುತ್ತಮುತ್ತ ಹರಡಿರುವ ಕಸದ ರಾಶಿ 

‘ಮೂಲಸೌಕರ್ಯ ಒದಗಿಸಲು ಕ್ರಮ’

ಮುಳುಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಮೂಲಸೌಕರ್ಯ ಕೊರತೆ ಬಗ್ಗೆ ಪರಿಶೀಲಿಸುತ್ತೇನೆ. ಭಕ್ತರಿಗೆ ಕುಡಿಯುವ ನೀರು ಮತ್ತು ವ್ಯವಸ್ಥಿತ ಶೌಚಾಲಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. – ಆದರ್ಶ್ ತಹಶೀಲ್ದಾರ್‌ ನಾಗಮಂಗಲ ‘ಪಾರ್ಕಿಂಗ್ ಸೌಲಭ್ಯವಿಲ್ಲ’ ದೇವಾಲಯದಲ್ಲಿ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಭಕ್ತರು ಅಡುಗೆ ಮಾಡಲು ಬಳಸಿದ ಸೌಧೆ ಕಲ್ಲು ಮತ್ತು ಬೀದಿಗಳನ್ನು ದೇವಾಲಯದ ಸುತ್ತಮುತ್ತಲಲ್ಲೇ ಬಿಟ್ಟು ಹೋಗುತ್ತಾರೆ. ಇದರಿಂದ ಸ್ವಚ್ಛತೆಯೂ ಮಾಯವಾಗಿದ್ದು ಅಶುಚಿತ್ವ ಎದ್ದು ಕಾಣುತ್ತದೆ. – ಶಿವಕುಮಾರ್‌ ಭಕ್ತ

ಪಾಳುಬಿದ್ದ ಯಾತ್ರಿನಿವಾಸ

ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣವಾಗಿರುವ ಮುಳಕಟ್ಟಮ್ಮ ದೇವಾಲಯದ ಯಾತ್ರಿನಿವಾಸವು ಸುಮಾರು ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಸರಿಯಾದ ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ. ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ದೇವಾಲಯದ ಸ್ವಲ್ಪ ದೂರದಲ್ಲಿ ಈ ಹಿಂದೆ ಇದ್ದ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಸುಲಭ ಶೌಚಾಲಯದ ಮತ್ತು ಸ್ನಾನಗೃಹಗಳಿದ್ದು ಸುತ್ತ ಗಿಡಗಂಟಿಗಳು ಬೆಳೆದಿವೆ. ಕಿಟಕಿ ಬಾಗಿಲು ಹಾಳಾಗಿದ್ದು ಬಳಕೆಗೆ ಬಾರದಂತಾಗಿವೆ.

ಕೆಟ್ಟುನಿಂತ ನೀರಿನ ಘಟಕ

ದೇವಾಲಯದ ಪಕ್ಕದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಅದು ಕೆಟ್ಟು ವರ್ಷಗಳೇ ಕಳೆದರೂ ದುರಸ್ತಿಯಾಗಿಲ್ಲ. ದುರಸ್ತಿ ಮಾಡದೇ ಇರುವುದಕ್ಕೆ ನೀರಿನ ಬಾಟಲಿ ಮಾರಾಟಗಾರರವೂ ಒತ್ತಡವೂ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ಘಟಕದ ಸಮೀಪದಲ್ಲಿಯೇ ಒಂದು ಕುಡಿಯುವ ನೀರಿನ ತೊಂಬೆಯಿದ್ದು ಅದು ಪಾಚಿಕಟ್ಟಿ ನಿಂತಿದ್ದು ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.