ADVERTISEMENT

ನಾಗಮಂಗಲದಾದ್ಯಂತ ಧಾರಾಕಾರ ಮಳೆ: ತುಂಬಿ ಹರಿದ ದುಮ್ಮಸಂದ್ರ ಅಣೆಕಟ್ಟು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:38 IST
Last Updated 7 ಆಗಸ್ಟ್ 2025, 2:38 IST
ನಾಗಮಂಗಲ ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ರಾತ್ರಿಯಿಡೀ ಸುರಿದ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಅಂಚೆಭೂವನಹಳ್ಳಿ ಗ್ರಾಮದ ಬಳಿ ರೈತರು ರಾಗಿ ಬಿತ್ತನೆ ಮಾಡಿದರು 
ನಾಗಮಂಗಲ ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ರಾತ್ರಿಯಿಡೀ ಸುರಿದ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಅಂಚೆಭೂವನಹಳ್ಳಿ ಗ್ರಾಮದ ಬಳಿ ರೈತರು ರಾಗಿ ಬಿತ್ತನೆ ಮಾಡಿದರು    

ನಾಗಮಂಗಲ: ಸೋಮವಾರ ಮತ್ತು ಮಂಗಳವಾರ ರಾತ್ರಿಯಿಡೀ ತಾಲ್ಲೂಕಿನಾದ್ಯಂತ ಗುಡುಗು ಮಿಂಚಿನೊಂದಿಗೆ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ವೀರವೈಷ್ಣವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದುಮ್ಮಸಂದ್ರ ಅಣೆಕಟ್ಟೆ ತುಂಬಿ ಹರಿದಿದೆ.

ತಾಲ್ಲೂಕಿನ ವಿವಿಧೆಡೆ ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 6ಕ್ಕೆ ಪ್ರಾರಂಭವಾದ ಮಳೆಯು ಮಧ್ಯರಾತ್ರಿಯವರೆಗೂ ಬಿರುಸಿನಿಂದ ಸುರಿಯಿತು. ಜೋರು ಮಳೆಯಿಂದ ಪಟ್ಟಣದ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ಕಡಿತವಾಗಿತ್ತು. ಅಲ್ಲದೇ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಕೆ.ಮಲ್ಲೇನಹಳ್ಳಿ, ಬೀರೇಶ್ವರಪುರ, ಗದ್ದೇಭೂವನಹಳ್ಳಿ, ಬದ್ರಿಕೊಪ್ಪಲು, ಮದಲಹಳ್ಳಿ, ಸಾರೀಮೇಗಲ ಕೊಪ್ಪಲು, ತೊಳಲಿ, ಚೌಡೇನಹಳ್ಳಿ , ಉಪ್ಪಾರಹಳ್ಳಿ ಮತ್ತು ಅರಸೇಗೌಡನಕೊಪ್ಪಲು ಭಾಗಗಳಲ್ಲೂ ಜೋರು ಮಳೆಯಾಯಿತು. ಪುರಸಭೆಯ ವ್ಯಾಪ್ತಿಯ ಹಲವೆಡೆ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಚರಂಡಿ ನೀರು ಸೇರಿದಂತೆ ಮಳೆಯ ನೀರು ರಸ್ತೆಗಳಲ್ಲಿ ತುಂಬಿ ಹರಿಯುವುದು ಕಂಡುಬಂತು. ಬುಧವಾರ ಸಂಜೆ ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಯಿತು.

ದೇವಲಾಪುರ ಹೋಬಳಿಯಲ್ಲಿ ಹೆಚ್ಚು ಮಳೆ

ಕಳೆದ ಮೂರು ದಿನದಿಂದ ತಾಲ್ಲೂಕಿನಾದ್ಯಂತ ಜೋರು ಮಳೆಯಾಗಿದ್ದು, ದೇವಲಾಪುರ ಹೋಬಳಿ 78.1 ಮಿ.ಮೀ ಮಳೆಯಾಗಿದ್ದು, ತಾಲ್ಲೂಕಿನಲ್ಲಿ ಹೆಚ್ಚು ಮಳೆ ಪಡೆದಿದೆ. ಜೊತೆಗೆ ಹೊಣಕೆರೆ ಹೋಬಳಿ 48.4 ಮಿ.ಮೀ, ಬಿಂಡಿಗನವಿಲೆ ಹೋಬಳಿ 44.2 ಮಿ.ಮೀ, ಬೆಳ್ಳೂರು ಹೋಬಳಿ 70.2 ಮಿ.ಮೀ, ಕಸಬಾ ಹೋಬಳಿ ವ್ಯಾಪ್ತಿಗಳಲ್ಲಿ 50.7 ಮಿ.ಮೀ ಮಳೆಯಾದರೆ ತಾಲ್ಲೂಕಿನಾದ್ಯಂತ 58.7 ಮಿ.ಮೀ ಮಳೆಯಾಗಿದೆ.

ADVERTISEMENT
ನಾಗಮಂಗಲ ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಬೆಳ್ಳೂರು ಹೋಬಳಿಯ ದುಮ್ಮಸಂದ್ರ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿ ಹರಿಯುತ್ತಿದೆ 

ತಾಲ್ಲೂಕಿನ ಬೆಳ್ಳೂರು ಹೋಬಳಿಯ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಜೋರು ಗಾಳಿಯೊಂದಿಗೆ ಮಳೆ ಸುರಿಯಿತು. ಬೆಳ್ಳೂರು ಹೋಬಳಿಯ ನೆಲ್ಲೀಗೆರೆ, ಬೆಳ್ಳೂರು ಪಟ್ಟಣ, ನಾಗತೀಹಳ್ಳಿ, ಕದಬಹಳ್ಳಿ, ಬೆಳ್ಳೂರು ಕ್ರಾಸ್, ಬಿ.ಜಿ.ನಗರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ. ಅಲ್ಲದೇ ಆದಿಚುಂಚನಗಿರಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಭಾರಿ ಮಳೆಯಾಗಿದ್ದು, ಹೆದ್ದಾರಿಯುದ್ದಕ್ಕೂ ಮಳೆ ನೀರು ಕಾಲುವೆಯಂತೆ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜೊತೆಗೆ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವಾಹನಗಳು ರಸ್ತೆ ಬದಿಯಲ್ಲಿ ಕೆಲ ಸಮಯ ನಿಂತು ಸಂಚರಿಸಿದವು. ಹಲವು ದಿನಗಳಿಂದ ಮಳೆಯಿಲ್ಲದೇ ಒಣಗಿ ನಿಂತಿದ್ದ ಹೊಲಗದ್ದೆಯಲ್ಲಿ ನೀರು ಸಂಗ್ರಹವಾಗಿರುವುದು ಕಂಡುಬಂತು.

ಅಲ್ಲದೇ ತಾಲ್ಲೂಕಿನ ದೇವಲಾಪುರ ಹೋಬಳಿ, ಹೊಣಕೆರೆ ಹೋಬಳಿ, ಬಿಂಡಿಗನವಿಲೆ ಹೋಬಳಿಯ ಭಾಗಗಳಲ್ಲಿ ಮಳೆಗಾಗಿ ಕಾಯುತ್ತಿದ್ದ  ರೈತರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.