ADVERTISEMENT

ನಾಗಮಂಗಲ: ಪೆಟ್ರೋಲ್‌ ಜತೆಗೆ ಪತ್ರಿಕೆ, ಪಾನೀಯ

ಗ್ರಾಹಕರಿಗೆ ಪೆಟ್ರೋಲ್ ಬಂಕ್ ಬೇಸಿಗೆ ಸೇವೆ

ಉಲ್ಲಾಸ್.ಯು.ವಿ
Published 12 ಏಪ್ರಿಲ್ 2024, 5:55 IST
Last Updated 12 ಏಪ್ರಿಲ್ 2024, 5:55 IST
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜ್ವಾಲಾಮಾಲಾ ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಪ್ರಜಾವಾಣಿ ದಿನ ಪತ್ರಿಕೆಯನ್ನು ವಿತರಿಸುತ್ತಿರುವ ಸಿಬ್ಬಂದಿಗಳು.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜ್ವಾಲಾಮಾಲಾ ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಪ್ರಜಾವಾಣಿ ದಿನ ಪತ್ರಿಕೆಯನ್ನು ವಿತರಿಸುತ್ತಿರುವ ಸಿಬ್ಬಂದಿಗಳು.   

ನಾಗಮಂಗಲ: ಬಿಸಿಲ ಬೇಗೆಯಲ್ಲಿ ಬಳಲಿ ಬರುವ ಗ್ರಾಹಕರಿಗೆ ಉಚಿತ ಮಜ್ಜಿಗೆ, ಹಣ್ಣಿನ ರಸ ವಿತರಿಸಿ ದಣಿವು ತಣಿಸುವ ಇಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

 ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಬೆಳ್ಳೂರು ಕ್ರಾಸ್‌ನಿಂದ ಕುಣಿಗಲ್ ಕಡೆಗೆ ಬಲಗಡೆ ಇರುವ ಸರ್ವಿಸ್ ರಸ್ತೆಯಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಜ್ವಾಲಾಮಾಲಾ ಪೆಟ್ರೋಲ್ ಬಂಕ್ ಪ್ರಾರಂಭಗೊಂಡು 15 ವರ್ಷಗಳಾಗಿದ್ದು,  ಆರು ವರ್ಷಗಳಿಂದ ಬೆಳಿಗ್ಗೆ  ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ನೂರಕ್ಕೂ ಹೆಚ್ಚು ಗ್ರಾಹಕರಿಗೆ ‘ ಪ್ರಜಾವಾಣಿ’ದಿನ ಪತ್ರಿಕೆಯನ್ನು ವಿತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. 

ಒಮ್ಮೆ ಬಂಕ್‌ಗೆ ಪೆಟ್ರೋಲ್ ಹಾಕಿಸಲು ಸುಡುವ ಬಿಸಿಲಿನಲ್ಲಿ ದಣಿದು ಬಂದಿದ್ದ ಬೈಕ್ ಸವಾರನನ್ನು ಕಂಡು ಅಂದಿನಿಂದ ಬೇಸಿಗೆಯ ಮೂರು ತಿಂಗಳು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಬಿಸಿಲಿನ ಅವಧಿಯಲ್ಲಿ 500ಕ್ಕೂ ಹೆಚ್ಚು ಗ್ರಾಹಕರಿಗೆ ಉಚಿತ ಮಜ್ಜಿಗೆ, ಪಾನಕ , ಕುಡಿಯುವ ನೀರನ್ನು ವಿತರಿಸಿ ಸಿಬ್ಬಂದಿ ಉಪಚರಿಸುತ್ತಿದ್ದಾರೆ. ಗ್ರಾಹಕರು ಮಾಲೀಕರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

ADVERTISEMENT

‘ ಸುಡು ಬಿಸಿಲಿನಲ್ಲಿ ಬಂಕ್‌ಗೆ ಬರುವ ಗ್ರಾಹಕರ ಪರದಾಟವನ್ನು ಹಲವು ಬಾರಿ ಕಂಡಿದ್ದು, ಜನರಿಗೆ ನೆರವಾಗುವ ಉದ್ದೇಶದಿಂದ ಆರು ವರ್ಷದಿಂದ ಬೆಳಿಗ್ಗೆ ದಿನಪತ್ರಿಕೆ; ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಂದೊಂದು ದಿನ ಮಜ್ಜಿಗೆ ಮತ್ತು ವಿವಿಧ ಬಗೆಯ ಹಣ್ಣಿನ ಪಾನಕವನ್ನು ನೀಡುತ್ತಿದ್ದೇವೆ. ಇದರಿಂದ ಗ್ರಾಹರಿಗೆ ನಮ್ಮ ಬಂಕ್ ಸಿಬ್ಬಂದಿ ಬಗ್ಗೆ ವಿಶ್ವಾಸ ಹೆಚ್ಚಾಗಿದ್ದು, ಜನರು ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಗ್ರಾಹಕರ ಸಂಖ್ಯೆಯೂ ಕೂಡ ಹೆಚ್ಚಾಗಿದೆ’ ಎಂದು ಮಾಲೀಕ ಬಿ.ಜಿ.ನರೇಶ್ ಕುಮಾರ್ ಹೇಳುತ್ತಾರೆ.

‘ಯಾವುದೇ ಪೆಟ್ರೋಲ್ ಬಂಕ್ ಸೇರಿದಂತೆ ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರು ಕೊಡುವುದೇ ದುಸ್ತರವಾಗಿರುತ್ತದೆ. ಆದರೆ ಜ್ವಾಲಾಮಾಲಾ ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಗಾಗಿ ಉಚಿತ ದಿನಪತ್ರಿಕೆ ಮತ್ತು ಬಿಸಿಲಿನಲ್ಲಿ ದಣಿದು ಬರುವ ಗ್ರಾಹಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸುವ ಸಮಾಜಮುಖಿ ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಲಿದ್ದು, ಎಷ್ಟೋ ಗ್ರಾಹಕರಿಗೆ ಅನುಕೂಲವಾಗುತ್ತಿದೆ’ ಎಂದು ವಾಹನ ಸವಾರ ಶಿವಕುಮಾರ್ ಬಂಕ್ ನ ಮಾಲೀಕರ ಕಾರ್ಯವನ್ನು ಶ್ಲಾಘಿಸಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜ್ವಾಲಾಮಾಲಾ ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಮಜ್ಜಿಗೆಯನ್ನು ವಿತರಿಸುತ್ತಿರುವ ಸಿಬ್ಬಂದಿಗಳು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.