ADVERTISEMENT

ನಾಗಮಂಗಲ | ರಾಗಿಯ ಗುಣಮಟ್ಟ ಉತ್ತಮವಾಗಿರಲಿ: ಸಚಿವ ಕಿವಿ ಮಾತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:40 IST
Last Updated 13 ಫೆಬ್ರುವರಿ 2026, 6:40 IST
ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಸ್ತುತ ವರ್ಷದ ರಾಗಿ ಖರೀದಿ ಕೇಂದ್ರವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇತ್ತೀಚೆಗೆ ಉದ್ಘಾಟಿಸಿದರು.
ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಸ್ತುತ ವರ್ಷದ ರಾಗಿ ಖರೀದಿ ಕೇಂದ್ರವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇತ್ತೀಚೆಗೆ ಉದ್ಘಾಟಿಸಿದರು.   

ನಾಗಮಂಗಲ: ಮುಕ್ತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ಒಂದುವರೆ ಸಾವಿರ ಹೆಚ್ಚು ಹಣವನ್ನು ಸರ್ಕಾರ ಪಾವತಿಸುತ್ತಿದೆ. ಹಾಗಾಗಿ, ರೈತರು ಸರ್ಕಾರದ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡುವ ರಾಗಿಯ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಸ್ತುತ ವರ್ಷದ ರಾಗಿ ಖರೀದಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಅನುಕೂಲಕ್ಕಾಗಿ ಈ ವರ್ಷ ಎರಡು ತಿಂಗಳ ಮುಂಚಿತವಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಅಂತೆಯೇ ರಾಗಿ ಮಾರಾಟಗಾರ ರೈತರ ನೋಂದಣಿಯನ್ನು ಸಹ ಮುಂಚಿತವಾಗಿಯೇ ಮಾಡಲಾಗಿತ್ತು. ಆದಾಗ್ಯೂ ರಾಗಿ ಒಕ್ಕಣೆ ಮಾಡುವಾಗಲೇ ಮಧ್ಯವರ್ತಿಗಳಿಗೆ ಮಾರಾಟ ಮಾಡುವ ಮೂಲಕ ಕೆಲ ರೈತರು ದಲ್ಲಾಳಿಗಳಿಗೆ ಸಹಕರಿಸಿರುವ ಬಗ್ಗೆ ಮಾತು ಕೇಳಿ ಬರುತ್ತಿದೆ. ನೀವು ಮಾರಾಟ ಮಾಡುವ ರಾಗಿಯನ್ನು ಪುನಃ ನಿಮ್ಮಂತಹ ನಾಗರಿಕರಿಗೆ ಆಹಾರ ರೂಪದಲ್ಲಿ ವಿತರಿಸಬೇಕಿದೆ. ಆದ್ದರಿಂದ ಮಾರಾಟ ಮಾಡುವ ರಾಗಿಯ ಗುಣಮಟ್ಟ ಉತ್ತಮವಾಗಿರಲಿ ಎಂದರು.

ADVERTISEMENT

ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಯ ಮಾರಾಟ ಸಂದರ್ಭದಲ್ಲಿ ಉದಾಸೀನತೆ ಬೇಡ. ಕೆಲವೊಂದು ಖಾಸಗಿ ತೂಕದ ಯಂತ್ರಗಳಲ್ಲಿ ಸಾಕಷ್ಟು ಸಮಸ್ಯೆ ಇರುವ ಬಗ್ಗೆ ಆಗಿಂದಾಗ್ಗೆ ದೂರುಗಳು ಕೇಳಿ ಬರುತ್ತಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸರ್ಕಾರಿ ತೂಕದ ಯಂತ್ರದಲ್ಲೇ ತೂಕ ಮಾಡಿಸಿದರೆ ಒಳ್ಳೆಯದು. ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಇಲಾಖೆಯೇ ಹೊಣೆ. ಹಾಗಾಗಿ, ತೂಕದಲ್ಲಿ ನಿಖರತೆ ಇರಲಿ ಎಂದು ತಿಳಿಸಿದರು.

ತಹಶೀಲ್ದಾರ್ ಜಿ.ಆದರ್ಶ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸರ್ವಜ್ಞ, ಆಹಾರ ಇಲಾಖೆಯ ಶಿರಸ್ತೇದಾರ್ ಶ್ರೀನಿವಾಸ್, ಆಹಾರ ನಿರೀಕ್ಷಕ ಅನಿಲ್‌ಕುಮಾರ್, ದೇವಲಾಪುರ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಜೆ.ರಾಜೇಶ್ ಹಾಗೂ ಮುಖಂಡ ಸಂಪತ್ ಇದ್ದರು.

‘ರೈತರ ಸಹಕಾರ ಅತಿ ಮುಖ್ಯ’

ಒಂದು ಕ್ವಿಂಟಲ್ ಉತ್ತಮ ರಾಗಿಗೆ ಮುಕ್ತ ಮಾರುಕಟ್ಟೆಯಲ್ಲಿ ಮೂರುವರೆ ಸಾವಿರ ಇದೆ ಎಂಬ ಮಾಹಿತಿ ಇದೆ. ಆದರೆ ಸರ್ಕಾರಿ ಖರೀದಿ ಕೇಂದ್ರದ ಮೂಲಕ ಮಾರಾಟವಾಗುವ ಪ್ರತಿ ಕ್ವಿಂಟಲ್ ರಾಗಿಗೆ ₹4900 ನಿಗದಿ ಪಡಿಸಿದ್ದು ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಮುಕ್ತ ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಬೆಲೆ ನೀಡುತ್ತಿದೆ. ಮಧ್ಯವರ್ತಿಗಳಿಂದ ರೈತರು ಮೋಸ ಹೋಗುವ ಜೊತೆಗೆ ರಾಗಿಯ ಗುಣಮಟ್ಟ ಹಾಳಾಗುವುದರಿಂದ ನಾಗರಿಕರಿಗೆ ಸರ್ಕಾರ ಪೂರೈಸುವ ಆಹಾರ ಪದಾರ್ಥದ ಗುಣಮಟ್ಟವೂ ಹಾಳಾಗುತ್ತದೆ. ಹಾಗಾಗಿ ಸರ್ಕಾರದ ಉದ್ದೇಶ ಸಾಕಾರವಾಗಲು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.