ADVERTISEMENT

ಜೆಡಿಎಸ್‌, ಕಾಂಗ್ರೆಸ್‌ ಮುಕ್ತ ಮಂಡ್ಯಕ್ಕೆ ಪಣತೊಡಿ

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ; ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 14:27 IST
Last Updated 18 ಅಕ್ಟೋಬರ್ 2019, 14:27 IST
ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಉದ್ಘಾಟಿಸಿದರು
ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಉದ್ಘಾಟಿಸಿದರು   

ಮಂಡ್ಯ: ಮಂಡ್ಯವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಕ್ತವಾಗಿ ಮಾಡಲು ಪಣತೊಡಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲೂ ಕಮಲ ಅರಳಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಲ್ಲಿದ್ದ ಕಾರ್ಯಕರ್ತರು ಇಲ್ಲಿಯೂ ಇರುತ್ತಾರೆ, ಇಲ್ಲಿದ್ದ ಕಾರ್ಯಕರ್ತರು ಅಲ್ಲಿಯೂ ಇರುತ್ತಾರೆ. ಇವುಗಳನ್ನು ನೋಡಿ ಜಿಲ್ಲೆಯ ಮಂದಿ ಬೇಸತ್ತಿದ್ದಾರೆ. ಜಿಲ್ಲೆಯ ಜನರನ್ನು ಪಕ್ಷದತ್ತ ಸೆಳೆಯಲು ಕಾರ್ಯಕರ್ತರು ಮುಂದಾಗಬೇಕು. ಲೋಕಸಭೆ ಚುನಾವಣೆಯಲ್ಲಿ ಹಣ, ತೋಳ್ಬಲಕ್ಕೆ ಮತ ನೀಡದೆ ಸ್ವಾಭಿಮಾನದ ಮಹಿಳೆಯನ್ನು ಗೆಲ್ಲಿಸಿದ್ದಾರೆ. ಮಂಡ್ಯ ಜನರ ಮತ ವಿವೇಚನೆಯನ್ನು ಪ್ರಶ್ನಿಸುವಂತೆಯೇ ಇಲ್ಲ’ ಎಂದು ಸೂಚನೆ ನೀಡಿದರು.

ADVERTISEMENT

‘ಯಾವುದೇ ಪಕ್ಷದಲ್ಲಿ ನೋಡಿದರೂ ಅಧಿಕಾರ ಎಂಬುದು ನಿಂತ ನೀರಿನಂತೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಅಧಿಕಾರ ಬದಲಾವಣೆ ಕಾಣಲು ಸಾಧ್ಯ. ಇದು ದೇಶದ ಅಭಿವೃದ್ಧಿಯ ವಿಚಾರದಲ್ಲೂ ಪ್ರತಿಬಿಂಬಿಸುತ್ತದೆ. ಹೊಸ ಜವಾಬ್ದಾರಿ ಹೊತ್ತವರು ಪರಿಣಾಮಕಾರಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಲ್ಲೂ ಬಿಜೆಪಿ ಬಾವುಟ ಹಾರಿಸುವ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘15 ಶಾಸಕರು ಬಂದು ರಾಜ್ಯ ಅಪಾಯದಲ್ಲಿದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ರಕ್ಷಿಸಬೇಕು ಎಂದು ಮನವಿ ಮಾಡಿದ್ದರು. ಅಂತೆಯೇ ಅವರೆಲ್ಲರ ಪ್ರೀತಿ, ಸಹಕಾರದಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಅಧಿಕಾರ ವಹಿಸಿಕೊಂಡ ನಂತರ ನೆರೆ–ಬರ ಎರಡೂ ಒಟ್ಟೊಟ್ಟಿಗೆ ಎದುರಾಯಿತು. ಆದರೂ ಯಾವುದಕ್ಕೂ ಕುಗ್ಗದೆ ಬಹಳ ಯಶಸ್ವಿಯಾಗಿ ನೆರೆ ನಿರ್ವಹಣೆ ಮಾಡಿದ್ದಾರೆ’ ಎಂದು ಹೇಳಿದರು.

‘ಹಣ, ತೋಳ್ಬಲ, ಗೂಂಡಾಗಿರಿ, ವಂಶಪಾರಂಪರ್ಯ, ಜಾತಿ, ಧರ್ಮ, ರಾಜಕೀಯದಿಂದ ಬಿಜೆಪಿ ಬೆಳೆದಿಲ್ಲ. ಬಿಜೆಪಿ ಬೆಳೆದಿರುವುದು ಕಾರ್ಯಕರ್ತರ ಬೆವರಿನ ಶ್ರಮದಿಂದ. ಅವರು ಬೂತ್‌ ಮಟ್ಟದಲ್ಲಿ ಸಂಘಟನೆ ಮಾಡಿದ್ದರಿಂದಲೇ ರಾಜ್ಯದ 25 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಿತು. ಇದೇ ರೀತಿ ಸಂಘಟನೆ ಮಾಡುವ ಮೂಲಕ ವಿಧಾನಸಭೆ ಚುನಾವಣೆಯಲ್ಲೂ ಎಲ್ಲಾ ಸ್ಥಾನಗಳನ್ನು ಗೆದ್ದು, ಯಾವುದೇ ಅಡೆ ತಡೆ ಇಲ್ಲದೆ ಐದು ವರ್ಷ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಲ್ಲದೆ ವಿದೇಶಗಳ ಅಧ್ಯಕ್ಷರಿಗೆ ಭಾರತದ ಸಂಸ್ಕೃತಿ ಪರಿಚಯಿಸಿದ್ದಾರೆ. ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ. ಸೈನಿಕ ಶಕ್ತಿ ಏನು ಎಂಬುದನ್ನು ಮನವರಿಕೆ ಮಾಡಿಕೊಟ್ಟ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಆರ್ಥಿಕ ಪರಿಸ್ಥಿತಿ ಕುಸಿದಿದೆ ಅಂತಾರೆ ಆದರೆ ಹಾಗೇನೂ ಆಗಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಮೋದಿ ಅವರ ಸ್ವಚ್ಛ ಭಾರತ, ಜನೌಷಧ, ಫಸಲ್‌ ಭಿಮಾ, ಉಜ್ವಲ ಯೋಜನೆ ಸೇರಿದಂತೆ ಜನಪರ ಯೋಜನೆಗಳ ಕಾರಣದಿಂದಲೇ ದೇಶದ 18ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.