ಮದ್ದೂರು: ತಾಲ್ಲೂಕಿನ ಕೆ. ಹೊನ್ನಲಗೆರೆ ಬಳಿಯ ರಾಜೇಗೌಡನದೊಡ್ಡಿ ಗ್ರಾಮದ ಆರ್.ಸಿ. ನಂಜುಂಡಸ್ವಾಮಿ 16 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ಮಣ್ಣಿನಿಂದ ಪರಿಸರಸ್ನೇಹಿ ಗೌರಿ–ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ.
1 ಅಡಿಯಿಂದ 4.5 ಅಡಿಗಳವರೆಗೆ ಜೇಡಿ ಮಣ್ಣಿನಿಂದ ಮೂರ್ತಿಯನ್ನು ತಯಾರು ಮಾಡುವ ಐವರು ಇದಕ್ಕಾಗಿ 6 ರಿಂದ 7 ತಿಂಗಳು ಪರಿಶ್ರಮ ಪಡುತ್ತಾರೆ. ಮೂರ್ತಿ ತಯಾರಿಕೆಗೆ ಇವರ ಪತ್ನಿ, ಮಕ್ಕಳು ಸಹಾಯ ಮಾಡುತ್ತಾರೆ.
ನೂರಾರು ಮೂರ್ತಿಗಳನ್ನು ತಯಾರು ಮಾಡುವ ಇವರು, ಗಣೇಶ ಚತುರ್ಥಿ ಹಬ್ಬವು ಸಮೀಪಸುತ್ತಿದ್ದoತೆಯೇ ಮದ್ದೂರು ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಕೆಲ ದಿನ ಅಂಗಡಿ ತೆರೆದು ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ. ಈ ವೃತ್ತಿಯಿಂದ ₹1 ಲಕ್ಷದಿಂದ ₹1.3 ಲಕ್ಷ ವರೆಗೆ ಲಾಭ ಪಡೆದು ಜೀವನಕ್ಕೆ ಆಸರೆ ಮಾಡಿಕೊಂಡಿದ್ದಾರೆ.
ಒಂದೂವರೆ ದಶಕದಿಂದ ಪರಿಸರ ಸ್ನೇಹಿ ಗೌರಿ– ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇನೆ, ಜನರು ಪಿಒಪಿ ಹಾಗೂ ರಾಸಾಯನಿಕ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದ ಮೂಲ ಪರಂಪರೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಬೇಕು ಎಂದು ಮೂರ್ತಿ ತಯಾರಕ ನಂಜುಂಡಸ್ವಾಮಿ ಹೇಳಿದರು.
ಮದ್ದೂರು ಪುರಸಭೆಯಿಂದ ಪಟ್ಟಣದ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನಷ್ಟೇ ಪ್ರತಿಷ್ಟಾಪಿಸಲು ಅವಕಾಶ ನೀಡಿದೆ. ಜನ ಜಾಗೃತಿಗಾಗಿ ರಿಕ್ಷಾಗಳಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ. ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಕಡೆಗಳಲ್ಲಿ ಹೋಗಿ ಪರಿಶೀಲನೆಯನ್ನೂ ಮಾಡಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಮೀನಾಕ್ಷಿ ಮಾಹಿತಿ ನೀಡಿದರು. ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪಟ್ಟಣದ ಹಳೆಬಸ್ ನಿಲ್ದಾಣದ ಬಳಿಯಿರುವ ಈಶ್ವರ ದೇವಸ್ಥಾನದ ಮುಂದೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.