ADVERTISEMENT

ಗ್ರಾಮಸ್ಥರಿಂದ ಸರ್ಕಾರಿ ಶಾಲೆಗೆ ಕಾಯಕಲ್ಪ

ಖಾಸಗಿ ಕಾನ್ವೆಂಟ್‌ಗಳಿಗೆ ಪೈಪೋಟಿ ನೀಡುತ್ತಿದೆ ಕಿರಗಸೂರು ಗ್ರಾಮದ ಸರ್ಕಾರಿ ಶಾಲೆ

ಎನ್.ಪುಟ್ಟಸ್ವಾಮಾರಾಧ್ಯ
Published 14 ಡಿಸೆಂಬರ್ 2019, 10:05 IST
Last Updated 14 ಡಿಸೆಂಬರ್ 2019, 10:05 IST
ಕಿರಗಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರೌಂಡ್‌ ಟೇಬಲ್‌ ಮೂಲಕ ಪಾಠ ಬೋಧನೆ ಮಾಡುತ್ತಿರುವುದು
ಕಿರಗಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರೌಂಡ್‌ ಟೇಬಲ್‌ ಮೂಲಕ ಪಾಠ ಬೋಧನೆ ಮಾಡುತ್ತಿರುವುದು   

ಮಳವಳ್ಳಿ: ಸಾರ್ವಜನಿಕರ ಸಹಭಾಗಿತ್ವ ನೀಡಿದರೆ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬಹುದು ಎಂಬುದಕ್ಕೆ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಕಿರಗಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಉದಾಹರಣೆ.

ಪ್ರಸ್ತುತ ಇಂಗ್ಲಿಷ್ ವ್ಯಾಮೋಹದಿಂದ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಎದುರಾಗಿದೆ. ಆದರೆ, ಕಿರಗಸೂರು ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿಕ್ಷಕರ ಇಚ್ಛಾಶಕ್ತಿಯಿಂದ ಖಾಸಗಿ ಶಾಲೆಗೂ ಪೈಪೋಟಿ ನೀಡುವಷ್ಟರ ಮಟ್ಟಿಗೆ ಸರ್ಕಾರಿ ಶಾಲೆಗೆ ಪುನಶ್ಚೇತನ ನೀಡಿದ್ದಾರೆ. ಈ ಭಾಗದಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.

ಕಗ್ಗಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಸೇರಿದ್ದು, ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ. ಗ್ರಾಮದಿಂದ 2 ಕಿ.ಮೀ. ದೂರದಲ್ಲಿ ಬೆಳಕವಾಡಿ ಗ್ರಾಮವಿದ್ದು, ಅಲ್ಲಿ ಹಲವು ಖಾಸಗಿ ಶಾಲೆಗಳಿವೆ. ಪೋಷಕರೆಲ್ಲರೂ ಇಂಗ್ಲಿಷ್‌ ಮಾಧ್ಯಮದ ಖಾಸಗಿ ಶಾಲೆಗಳಿಗೆ ಆಕರ್ಷಿತರಾಗಿ ಮಕ್ಕಳನ್ನು ಬಸ್‌, ವ್ಯಾನ್‌ಗಳಲ್ಲಿ ಕಳುಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆಯೂ ಕಿರಗಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಳ ಮಾಡಲಾಯಿತು.

ADVERTISEMENT

ಆರಂಭದಲ್ಲಿ ಬೆರಳೆಣಿಕೆಯಷ್ಟು ಮಕ್ಕಳಿದ್ದರು. ಆದರೆ, ಈಗ 23 ಎಲ್‌ಕೆಜಿ, ಯುಕೆಜಿ, 1ರಿಂದ 7ನೇ ತರಗತಿವರೆಗೆ 88 ಮಕ್ಕಳು ಸೇರಿ ಒಟ್ಟು 111 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಖಾಸಗಿ ಶಾಲೆಗೆ ಆಕರ್ಷಿತರಾಗಿದ್ದ ಪೋಷಕರು ಈಗ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣವನ್ನು ನೋಡಿ ಕೊಂಡಾಡುತ್ತಿದ್ದಾರೆ. ಖಾಸಗಿ ಶಾಲೆಗೆ ಕಳುಹಿಸುವುದು ಕಡಿಮೆಯಾಗಿದ್ದು, ಈ ಸರ್ಕಾರಿ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗ ತೊಡಗಿದೆ.

ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿಕ್ಷಕರು ಒಗ್ಗೂಡಿ ‘ಶಾಲಾ ಹಿತೈಷಿಗಳ ಸಮಿತಿ’ ರಚಿಸಿದ್ದಾರೆ. ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆದು ಅದಕ್ಕೆ ವಂತಿಗೆ ಸಂಗ್ರಹಿಸಿದ್ದಾರೆ. ಎಲ್‌ಕೆಜಿ, ಯುಕೆಜಿಗೆ ಪಾಠ ಬೋಧಿಸಲು ಖಾಸಗಿ ಶಿಕ್ಷಕರನ್ನು ನೇಮಿಸಿ ವೇತನ ನೀಡುತ್ತಾ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ದಾನಿಗಳಿಂದ ಧನಸಹಾಯ ಪಡೆದು ಕಂಪ್ಯೂಟರ್, ಸ್ಮಾರ್ಟ್ ಟಿ.ವಿ, ಉತ್ತಮ ಬೋರ್ಡ್, ನೀರಿನ ಟ್ಯಾಂಕ್ ಸೌಲಭ್ಯ ಒದಗಿಸಿದ್ದಾರೆ. ಸಂಘ ಸಂಸ್ಥೆಗಳು ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು, ಶೂ, ಸಾಕ್ಸ್, ರೌಂಡ್ ಟೇಬಲ್, ಡೆಸ್ಕ್ ವಿತರಿಸಿವೆ.

ಶಾಲೆಯ ಹೊರ ಆವರಣದಲ್ಲಿ ಉತ್ತಮ ಉದ್ಯಾನ ರೂಪಿಸಿದ್ದು, ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದು, ಐವರು ಕಾಯಂ ಶಿಕ್ಷಕರಿದ್ದಾರೆ. ಒಬ್ಬರು ಅತಿಥಿ ಶಿಕ್ಷಕರು, ಶಾಲಾ ಹಿತೈಷಿಗಳ ವತಿಯಿಂದ ಒಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಪಕ್ಕದ ಅಂತರಾಯನಪುರ ದೊಡ್ಡಿಯ ಪೋಷಕರೂ ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

‘ಮೈದಾನದ ವ್ಯವಸ್ಥೆ ಕಲ್ಪಿಸಲಿ’

‌ಅಗತ್ಯ ಮೂಲ ಸೌಲಭ್ಯಗಳಿದ್ದರೂ ಈ ಶಾಲೆಯಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಮೈದಾನದ ಕೊರತೆ ಇದೆ. ಮೈದಾನದ ವ್ಯವಸ್ಥೆ ಕಲ್ಪಿಸಿ ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ನೀಡಬೇಕಿದೆ. ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿಗೆ ತುಂಬಾ ಸಹಕಾರ ನೀಡುತ್ತಿದ್ದಾರೆ. ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ದಾನಿಗಳಿಂದ ಕೊಡಿಸಿದ್ದಾರೆ. ಸಾರ್ವಜನಿಕರು ಕೈಜೋಡಿಸಿದರೆ ಉತ್ತಮ ಕೆಲಸಗಳು ನಡೆಯುತ್ತವೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ಮುಖ್ಯಶಿಕ್ಷಕ ಮಂಟೇಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.