ADVERTISEMENT

ಅಂಚೆ ಕಚೇರಿಗಳಲ್ಲಿ ಸಿಗದ ಆಧಾರ್‌ ಸೇವೆ

ಬ್ಯಾಂಕ್‌ಗಳಲ್ಲಿ 10 ಮಂದಿಗೆ ಮಾತ್ರ ಸೀಮಿತ, ನೋಂದಣಿ, ತಿದ್ದುಪಡಿಗಾಗಿ ಪರದಾಟ

ಎಂ.ಎನ್.ಯೋಗೇಶ್‌
Published 12 ಫೆಬ್ರುವರಿ 2021, 19:30 IST
Last Updated 12 ಫೆಬ್ರುವರಿ 2021, 19:30 IST
ಮಂಡ್ಯದ ಕೇಂದ್ರ ಅಂಚೆ ಕಚೇರಿ (ಸಂಗ್ರಹ ಚಿತ್ರ)
ಮಂಡ್ಯದ ಕೇಂದ್ರ ಅಂಚೆ ಕಚೇರಿ (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ಸಮರ್ಪಕವಾಗಿ ಆಧಾರ್‌ ಸೇವೆ ದೊರೆಯದೆ ಜನರು ಪರದಾಡುವಂತಾಗಿದೆ. ನಗರದ ಕೇಂದ್ರ ಅಂಚೆ ಕಚೇರಿ ಸೇರಿ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿರುವ ಕಚೇರಿಗಳಲ್ಲಿ ಅತೀ ಕಡಿಮೆ ಆಧಾರ್‌ ಸೇವೆ ನೀಡಿರುವುದು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಆಧಾರ್‌ ವಿತರಣೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಅಂಚೆ ಕಚೇರಿಗಳಲ್ಲಿ ಆಧಾರ್‌ ಸೇವೆ ನೀಡಲು ಪ್ರಮುಖ ಆದ್ಯತೆ ನೀಡಬೇಕಾಗಿತ್ತು. ಕೇಂದ್ರ ಕಚೇರಿ ಸೇರಿ ಜಿಲ್ಲೆಯ 29 ಅಂಚೆ ಕಚೇರಿಗಳು ಆಧಾರ್‌ ಸೇವೆ ನೀಡಬೇಕು. ಅದಕ್ಕಾಗಿ ಸರ್ಕಾರ ಎಲ್ಲಾ ಕಚೇರಿಗಳಿಗೂ ಆಧಾರ್‌ ಕಿಟ್‌ ವಿತರಣೆ ಮಾಡಿದೆ. ಸಿಬ್ಬಂದಿ ಸಮರ್ಪಕವಾಗಿ ಸೇವೆ ನೀಡದ ಕಾರಣ ಗ್ರಾಮೀಣ ಭಾಗದ ಜನರು ಖಾಸಗಿ ಸೇವಾ ಕೇಂದ್ರಗಳನ್ನು ಅವಲಂಬಿಸುವಂತಾಗಿದೆ.

2019 ಏಪ್ರಿಲ್‌ ತಿಂಗಳಿಂದ ಇಲ್ಲಿಯವರೆಗೆ ಜಿಲ್ಲೆಯ 29 ಅಂಚೆ ಕಚೇರಿಯಲ್ಲಿ ಕೇವಲ 14 ಸಾವಿರ ಮಂದಿಗೆ ಆಧಾರ್‌ ಸೇವೆ ನೀಡಲಾಗಿದೆ. ಅದರಲ್ಲಿ ಕೇಂದ್ರ ಅಂಚೆ ಕಚೇರಿ 3 ಸಾವಿರ ಮಂದಿಗೆ ಮಾತ್ರ ಸೇವೆ ನೀಡಿದೆ. 2019–20ರಲ್ಲಿ ಪಾಂಡವಪುರ ಅಂಚೆ ಕಚೇರಿ ಕೇವಲ 8 ಮಂದಿಗೆ ಸೇವೆ ನೀಡಿದೆ. ಮದ್ದೂರು ಕಚೇರಿ 13, ಕೆ.ಆರ್‌.ಪೇಟೆಯಲ್ಲಿ 18 ಮಂದಿಗೆ ಸೇವೆ ನೀಡಲಾಗಿದೆ.

ADVERTISEMENT

‘ಮಂಡ್ಯ ಕೇಂದ್ರ ಅಂಚೆ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿದ್ದಾರೆ. ಆಧಾರ್‌ ಸೇವೆ ನೀಡುವ ಸಿಬ್ಬಂದಿ ರಜೆ ಹಾಕಿದ್ದರೆ ಅವರ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲ. ತಿಂಗಳಲ್ಲಿ ನಾಲ್ಕೈದು ದಿನ ಮಾತ್ರ ಆಧಾರ್‌ ಕೆಲಸ ನಡೆಯುತ್ತದೆ. ಉಳಿದ ದಿನಗಳಲ್ಲಿ ಬೇರೆ ಕಡೆ ಹೋಗಿ ಎಂದು ನೇರವಾಗಿ ಹೇಳುತ್ತಾರೆ’ ಹನಿಯಂಬಾಡಿ ಗ್ರಾಮದ ನಿವಾಸಿ ಸೋಮಶೇಖರ್‌ ಆರೋಪಿಸಿದರು.

‘ಆಧಾರ್‌ ತಿದ್ದುಪಡಿಗಾಗಿ ವಾರಗಟ್ಟಲೆ ಅಲೆದಿದ್ದೇನೆ, ನಿತ್ಯವೂ ನಾಳೆ ಬನ್ನಿ ಎನ್ನುತ್ತಾರೆ. ಪ್ರಶ್ನಿಸಿದರೆ ಮೇಲಾಧಿಕಾರಿಗಳತ್ತ ಬೆರಳು ತೋರುತ್ತಾರೆ. ಕೇಂದ್ರ ಅಂಚೆ ಕಚೇರಿ ಸಿಬ್ಬಂದಿ ಸಾಮಾನ್ಯ ಜನರಿಗೆ ಸ್ಪಂದಿಸುತ್ತಿಲ್ಲ’ ಎಂದು ಮಹಿಳೆಯೊಬ್ಬರು ಆರೋಪಿಸಿದರು.

ಬ್ಯಾಂಕ್‌ಗಳಲ್ಲಿ ಸೀಮಿತ ಸೇವೆ: ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಆಧಾರ್‌ ಸೇವೆ ನೀಡಲಾಗುತ್ತಿದೆ. ಆದರೆ ದಿನಕ್ಕೆ 10–12 ಮಂದಿಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಾಗಿದೆ. ಇದರಿಂದ ಜನರು ಬ್ಯಾಂಕ್‌ಗಳಲ್ಲೂ ಸಮರ್ಪಕ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಚೆ ಕಚೇರಿ ಸಿಬ್ಬಂದಿ ಬ್ಯಾಂಕ್‌ನತ್ತ ಬೆರಳು ತೋರಿದರೆ, ಬ್ಯಾಂಕ್‌ ಸಿಬ್ಬಂದಿ ಅಂಚೆ ಕಚೇರಿಯತ್ತ ಕೈ ತೋರುತ್ತಾರೆ. ಇದರಿಂದಾಗಿ ಸಾಮಾನ್ಯ ಜನರು ಅಲೆದಾಡುವಂತಾಗಿದೆ.

‘ಬ್ಯಾಂಕ್‌ಗಳಲ್ಲಿ ಟೋಕನ್‌ ಪಡೆದವರು ಮಾತ್ರ ಸೇವೆ ಪಡೆಯಬೇಕು. ಟೋಕನ್‌ ಇಲ್ಲದಿದ್ದರೆ ಆಧಾರ್‌ ಕೆಲಸ ಸಿಗುವುದಿಲ್ಲ. ಟೋಕನ್‌ ಪಡೆಯಲು ಒಂದು ದಿನ, ಸೇವೆಗೆ ಇನ್ನೊಂದು ದಿನ ಬ್ಯಾಂಕ್‌ಗೆ ಬರಬೇಕಾಗಿದೆ. ಜೊತೆಗೆ ತಾಂತ್ರಿಕ ಸಮಸ್ಯೆಯಾದರೆ ಮತ್ತೊಂದು ದಿನ ಬರಬೇಕಾಗುತ್ತದೆ’ ಎಂದು ಇಂಡುವಾಳು ಗ್ರಾಮದ ನಂಜೇಗೌಡ ನೋವು ತೋಡಿಕೊಂಡರು.

ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಅತ್ಯಾವಶ್ಯವಾಗಿದೆ. ವಿಳಾಸ ತಿದ್ದುಪಡಿ, ಮೊಬೈಲ್‌ ನಂಬರ್‌ ಸೇರ್ಪಡೆ, ದೋಷ ಸರಿಪಡಿಸಲಷ್ಟೇ ಜನರು ಬರುತ್ತಾರೆ. ಸರ್ಕಾರ ನಿಗದಿ ಮಾಡಿರುವ ಶುಲ್ಕ ಪಡೆದು ಸೇವೆ ನೀಡಬೇಕು. ಸಮರ್ಪಕ ಸೌಲಭ್ಯ ದೊರೆಯದ ಕಾರಣ ಜನರು ಪರದಾಡುವಂತಾಗಿದೆ.

ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಕ್ಯೂ
ಅಂಚೆಕಚೇರಿ, ಬ್ಯಾಂಕ್‌ಗಳಲ್ಲಿ ಸಮರ್ಪಕ ಸೇವೆ ದೊರೆಯದ ಕಾರಣ ಜನರು ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ನಿತ್ಯವೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. 2 ಕೌಂಟರ್‌ಗಳಲ್ಲಿ ಸೇವೆ ನೀಡುತ್ತಿದ್ದು ಪ್ರತಿ ಕೌಂಟರ್‌ನಲ್ಲಿ ತಲಾ 40 ಮಂದಿಗೆ ಸೇವೆ ನೀಡಲಾಗುತ್ತಿದೆ.

‘ಮದ್ದೂರು ಬಿಎಸ್ಎನ್‌ಎಲ್‌ ಕಚೇರಿಯಲ್ಲೂ ಆಧಾರ್‌ ಸೇವೆ ನೀಡಲಾಗುತ್ತಿದೆ. ಶೀಘ್ರ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಸೇವೆ ದೊರೆಯಲಿದೆ. ಅದಕ್ಕಾಗಿ ಅಗತ್ಯ ಕಿಟ್‌ಗಳು ಈಗಾಗಲೇ ಬಂದಿವೆ. ನಮ್ಮದೇ ಇಂಟರ್‌ನೆಟ್‌ ನೆಟ್‌ವರ್ಕ್‌ ಇರುವುದರಿಂದ ತಾಂತ್ರಿಕ ತೊಂದರೆ ಇರುವುದಿಲ್ಲ’ ಎಂದು ಬಿಎಸ್‌ಎನ್‌ಎಲ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

**
ಕೋವಿಡ್‌ ಕಾರಣದಿಂದ ಆಧಾರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇನ್ನುಮುಂದೆ ನಿರಂತರವಾಗಿ ಆಧಾರ್‌ ಸೇವೆ ದೊರೆಯಲಿದೆ.
-ಜಾನ್ಸನ್‌ ರಾಯ್‌, ಪೋಸ್ಟ್‌ ಮಾಸ್ಟರ್‌, ಕೇಂದ್ರ ಅಂಚೆ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.