ADVERTISEMENT

29 ತಿಂಗಳಿಂದ ವೇತನವಿಲ್ಲ: ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 17:36 IST
Last Updated 3 ಆಗಸ್ಟ್ 2018, 17:36 IST
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯಿತಿಯ ನೌಕರರು ವೇತನಕ್ಕಾಗಿ ಆಗ್ರಹಿಸಿ ಕಚೇರಿಗೆ ಬೀಗ ಹಾಕಿ ಧರಣಿ ನಡೆಸಿದರು
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯಿತಿಯ ನೌಕರರು ವೇತನಕ್ಕಾಗಿ ಆಗ್ರಹಿಸಿ ಕಚೇರಿಗೆ ಬೀಗ ಹಾಕಿ ಧರಣಿ ನಡೆಸಿದರು   

ನಾಗಮಂಗಲ: 29 ತಿಂಗಳಿನಿಂದ ವೇತನವಿಲ್ಲದೇ ಬೇಸತ್ತ ಗ್ರಾಮ ಪಂಚಾಯಿತಿ ನೌಕರರು ಶುಕ್ರವಾರ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಸಾಂಕೇತಿಕ ಧರಣಿ ನಡೆಸಿದರು.

‘ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ವಾಟರ್‌ಮನ್‌ ಸೇರಿದಂತೆ 20ಕ್ಕೂ ಹೆಚ್ಚು ನಿಯಮಾನುಸಾರ ಅನುಮೋದಿತ ಸಿಬ್ಬಂದಿಗೆ ಸಲ್ಲದ ಕಾರಣಗಳ ನೆಪದಿಂದ 29 ತಿಂಗಳುಗಳಿಂದ ವೇತನ ನೀಡದೇ ಜೀವನದ ಕನಿಷ್ಠ ನಿರ್ವಹಣೆಗೂ ಸಾಧ್ಯವಾಗದೇ ನಮ್ಮ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಜೊತೆ ಆರೋಗ್ಯದ ಸಮಸ್ಯೆ ಎದುರಿಸಲು ಕಷ್ಟವಾಗಿದೆ. ನಮ್ಮ ಈ ದುಃಸ್ಥಿತಿಗೆ ಇಲ್ಲಿಯ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮೇಲಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ. ಬಡತನದ ಬೇಗೆಯಲ್ಲಿ ಬೆಂದಿರುವ ಹಾಗೂ ಬಳಲುತ್ತಿರುವ ನಮ್ಮ ಸಹನೆಗೂ ಇತಿಮಿತಿ ಇದೆ. ಇದು ಹೀಗೆಯೇ ಮುಂದುವರಿದರೆ ಕಚೇರಿಯ ಆವರಣದಲ್ಲೇ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಗ್ರಾ.ಪಂ ಉಪಾಧ್ಯಕ್ಷ ದೇವರಾಜು ದೂರವಾಣಿ ಮೂಲಕ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಹಾಗೂ ಮಾಧ್ಯಮದವರು ಸ್ಥಳಕ್ಕೆ ಬರುತ್ತಿದ್ದಂತೆ ಪಿಡಿಒ ಇಮ್ರಾನ್ ಅಲಿ ಸ್ಥಳದಿಂದ ಕಾಲ್ಕಿತ್ತರು.

ADVERTISEMENT

ಪರಾರಿಯಾದ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಪಾಧ್ಯಕ್ಷರು ಸಿಬ್ಬಂದಿಯ ಜೊತೆ ಧರಣಿಗೆ ಕುಳಿತರು. ನಂತರ ಪಿಡಿಒ ಅವರನ್ನು ಮತ್ತೆ ಧರಣಿ ಸ್ಥಳಕ್ಕೆ ಕರೆತಂದರು. 2 ತಿಂಗಳ ವೇತನವನ್ನು ಕೊಡುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.

ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ನಾಗರಾಜು ಸ್ಥಳಕ್ಕೆ ಬಾರದಿರುವುದು ಪ್ರತಿಭಟನಾ ನಿರತ ನೌಕರರ ಆಕ್ರೋಶಕ್ಕೆ ಕಾರಣವಾಯಿತು. ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ಪರಿಣಾಮವಾಗಿ ವಿವಿಧ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ವಾಟರ್‌ಮನ್‌ಗಳಾದ ಶಿವರಾಜು, ರಾಮು, ಜಗದೀಶ, ಕೃಷ್ಣೇಗೌಡ, ರಾಜೇಗೌಡ, ಕಂಪ್ಯೂಟರ್ ಆಪರೇಟರ್ ಧನಲಕ್ಷ್ಮಿ, ಗ್ರಾ.ಪಂ ಮಾಜಿ ಅಧ್ಯಕ್ಷ ನರಸಿಂಹೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.