ADVERTISEMENT

ಪ್ರಗತಿ ಕಾಣದ ತನಿಖೆ: ಪ್ರಭಾವಿಗಳ ಕೈವಾಡ?

ಆರೋಪಿ ಸೋಮಶೇಖರ್‌ ಕಸ್ಟಡಿ ಇಂದಿಗೆ ಕೊನೆ, ಶಂಕಿತರ ಬಂಧನ ಏಕಿಲ್ಲ?

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 14:03 IST
Last Updated 18 ಅಕ್ಟೋಬರ್ 2020, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಅಧಿಕ ಬಡ್ಡಿ ಆಸೆ ತೋರಿಸಿ ಹಣ, ಚಿನ್ನ ಪಡೆದು ಮಹಿಳೆಯರಿಗೆ ಮೋಸ ಮಾಡಿದ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡಿಲ್ಲ. ಇದಕ್ಕೆ ಪ್ರಭಾವಿಗಳ ಒತ್ತಡ ಕಾರಣ ಇರಬಹುದು ಎಂದು ಹಣ ಕಳೆದುಕೊಂಡ ಮಹಿಳೆಯರು ಆರೋಪಿಸುತ್ತಾರೆ.

ಪ್ರಮುಖ ಆರೋಪಿ ಸೋಮಶೇಖರ್‌ ಪೊಲೀಸ್‌ ಕಸ್ಟಡಿ ಸೋಮವಾರಕ್ಕೆ (ಅ.19) ಕೊನೆಗೊಳ್ಳಲಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಪೊಲೀಸ್‌ ವಶಕ್ಕೆ ಪಡೆದು ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಬೇಕಾಗಿದೆ. ಸೋಮಶೇಖರ್‌ ವಹಿವಾಟಿಗೆ ಸಹಾಯ ಮಾಡಿರುವ ಕೆಲವು ಪ್ರಭಾವಿಗಳ ಒತ್ತಡದಿಂದಾಗಿ ಹಣ ಕಳೆದುಕೊಂಡ ಮಹಿಳೆಯರು ಠಾಣೆಗೆ ಬರಲು, ದೂರು ಕೊಡಲು ಹಿಂಜರಿಯುತ್ತಿದ್ದಾರೆ. ತನಿಖೆ ಪ್ರಗತಿ ಕಾಣದಿರಲು ಇದು ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಚಿನ್ನ ಕಳೆದುಕೊಂಡವರು ದೂರು ನೀಡಲು, ಮಾಹಿತಿ ನೀಡಲು ಮುಂದೆ ಬಾರದಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಜೊತೆಗೆ ಹಣ, ಚಿನ್ನ ಕೊಟ್ಟಿರುವ ಸಂಬಂಧ ಯಾವುದೇ ದಾಖಲಾತಿ ಇಲ್ಲದಿರುವ ಕಾರಣ ತನಿಖೆಗೆ ಸಮಸ್ಯೆಯಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ADVERTISEMENT

‘ಹಣ, ಚಿನ್ನ ಪಡೆಯಲು ಸಹಾಯ ಮಾಡಿರುವ ಕೆಲವರು ಸೋಮಶೇಖರ್‌ ಜಾಮೀನಿಗೆ ಯತ್ನಿಸುತ್ತಿದ್ದಾರೆ. ಅವನು ಹೊರಗೆ ಬಂದರೆ ಪ್ರಕರಣ ಬಿದ್ದು ಹೋಗಲಿದೆ. ಸೋಮಶೇಖರ್‌ನನ್ನು ಬಳಸಿಕೊಂಡು ಹಣ ತಿಂದಿರುವವರನ್ನು ಪೊಲೀಸರು ಬಂಧಿಸುತ್ತಿಲ್ಲ. ತಮ್ಮ ಪ್ರಭಾವ ಬಳಸಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಪೊಲೀಸರು ಕೇವಲ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ, ಆದರೆ ಆರೋಪಿಗಳ ಪಾತ್ರದ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಗಾಂಧಿನಗರದ ಮಹಿಳೆಯೊಬ್ಬರು ತಿಳಿಸಿದರು.

‘ಸೋಮಶೇಖರ್‌ನನ್ನು ಬಳಸಿಕೊಂಡು ವಹಿವಾಟು ನಡೆಸಿರುವ ಮಹಿಳೆಯರು ರಾಜಕೀಯ ಪಕ್ಷವೊಂದರ ನಾಯಕಿಯರಾಗಿದ್ದು ಅವರನ್ನು ಪ್ರಶ್ನೆ ಮಾಡುವ ಗೋಜಿಗೆ ಪೊಲೀಸರು ಹೋಗುತ್ತಿಲ್ಲ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮತ್ತೊಬ್ಬ ಆರೋಪಿ ಪೂಜಾ ನಿಖಿಲ್‌ಳನ್ನು ಕೇವಲ ವಿಚಾರಣೆಗಷ್ಟೇ ಸೀಮಿತ ಮಾಡಿರುವ ಪೊಲೀಸರ ನಡೆ ಅನುಮಾನಾಸ್ಪದವಾಗಿದೆ’ ಎಂದು ಅವರು ಆರೋಪಿಸಿದರು.

ಪೂಜಾ ಬಗ್ಗೆ ಏನೇ ಕೇಳಿದರೂ ಪೊಲೀಸರು ‘ಈಗ ಏನನ್ನೂ ಹೇಳುವುದಿಲ್ಲ, ತನಿಖೆ ಪ್ರಗತಿಯಲ್ಲಿದೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ.

ಚಿನ್ನ ಬಿಡಿಸಿಕೊಂಡರು: ಆರೋಪಿ ಚಿನ್ನ ಪಡೆದು ಅವರ ಹೆಸರಿನಲ್ಲೇ ಅಡಮಾನ ಮಾಡಿದ್ದಾನೆ. ಚಿನ್ನದ ಮಾಲೀಕರನ್ನೇ ಫೈನಾನ್ಸ್‌ಗಳಿಗೆ ಕರೆದು ಫೋಟೊ ತೆಗಿಸಿ, ಸಹಿ ಮಾಡಿಸಿ ಕಳುಹಿಸಿದ್ದಾನೆ. ಕಲವರಿಗೆ ರಶೀದಿಯನ್ನೂ ಕೊಟ್ಟಿದ್ದಾನೆ. ರಶೀದಿ ಇರುವವರು ಫೈನಾನ್ಸ್‌ಗಳಿಗೆ ತೆರಳಿ ಅಸಲು, ಬಡ್ಡಿ ಪಾವತಿ ಮಾಡಿ ಚಿನ್ನ ಬಿಡಿಸಿಕೊಂಡಿದ್ದಾರೆ.

30 ಗ್ರಾಂ ಚಿನ್ನಕ್ಕೆ ₹ 2 ಲಕ್ಷ ಸಾಲ!
ಚಿನ್ನ ಅಡಮಾನ ಮಾಡಿ, ಸಾಲ ವಿತರಣೆಯಲ್ಲಿ ಖಾಸಗಿ ಫೈನಾನ್ಸ್‌ಗಳು ನಿಯಮ ಉಲ್ಲಂಘನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಆರ್‌ಬಿಐ ನಿರ್ದೇಶನಗಳನ್ನು ಗಾಳಿಗೆ ತೂರಿ ಚಿನ್ನಕ್ಕೆ ಅತೀ ಹೆಚ್ಚು ಸಾಲ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮಹಿಳೆಯೊಬ್ಬರು ನೀಡಿದ್ದ 30 ಗ್ರಾಂ ಚಿನ್ನವನ್ನು ಖಾಸಗಿ ಫೈನಾನ್ಸ್‌ವೊಂದರಲ್ಲಿ ಇಟ್ಟು ಆರೋಪಿ ₹ 2 ಲಕ್ಷ ಸಾಲ ಪಡೆದಿದ್ದಾನೆ. ಇದು ಗರಿಷ್ಠ ಮೊತ್ತಕ್ಕೂ ಒಂದೂವರೆ ಪಟ್ಟು ಹೆಚ್ಚಾಗಿದ್ದು ಫೈನಾನ್ಸ್‌ಗಳ ಸಿಬ್ಬಂದಿ ಸೋಮಶೇಖರ್‌ ಜೊತೆ ಶಾಮೀಲಾಗಿ ಹೆಚ್ಚು ಹಣ ನೀಡಿದ್ದಾರೆ ಎಂದು ಚಿನ್ನ ಕಳೆದುಕೊಂಡವರು ಆರೋಪಿಸುತ್ತಾರೆ.

ಮಂಡ್ಯದ 10ಕ್ಕೂ ಫೈನಾನ್ಸ್‌ಗಳಲ್ಲಿ ಆರೋಪಿ ಚಿನ್ನ ಇಟ್ಟಿದ್ದು ಅಕ್ರಮ ವಹಿವಾಟಿನ ಹಿಂದೆ ಫೈನಾನ್ಸ್‌ಗಳ ಸಿಬ್ಬಂದಿಯೂ ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.