ADVERTISEMENT

ಮಂಡ್ಯ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ 56 ನೋಡಲ್ ಅಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:29 IST
Last Updated 19 ಡಿಸೆಂಬರ್ 2025, 7:29 IST
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಿಇಒ, ಬಿಆರ್‌ಸಿ ಮತ್ತು ಸಿಆರ್‌ಸಿಗಳು ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಿಇಒ, ಬಿಆರ್‌ಸಿ ಮತ್ತು ಸಿಆರ್‌ಸಿಗಳು ಪಾಲ್ಗೊಂಡಿದ್ದರು    

ಮಂಡ್ಯ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ 56 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಜಿ.ಪಂ. ಸಿಇಒ ನಂದಿನಿ ಕೆ.ಆರ್. ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಶಾಲೆಗಳಿಗೆ ಡಿಸೆಂಬರ್ 20ರೊಳಗಾಗಿ ಭೇಟಿ ನೀಡಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಡಿಡಿಪಿಐ ಅವರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ADVERTISEMENT

ಕೆಲವು ಶಾಲೆಗಳಲ್ಲಿ ಪಠ್ಯಗಳನ್ನು ಸರಿಯಾಗಿ ಬೋಧಿಸುತ್ತಿಲ್ಲ, ಕೆಲವು ಶಿಕ್ಷಕರು ಅನೇಕ ಕಾರಣಗಳನ್ನು ನೀಡಿ ರೆಗ್ಯುಲರ್‌ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ, ವಿಶೇಷ ತರಗತಿಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಹಾಗೂ ಮಾದರಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಜ್ಜುಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆ ಅನೇಕ ದೂರುಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ಸ್ವತಃ ಪರಿಶೀಲಿಸಿ ಖಚಿತಪಡಿಸಿಕೊಂಡು ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕ್ರಿಯಾ ಯೋಜನೆ ಸಿದ್ದಪಡಿಸಿ

ಈ ಸಭೆಗೆ ಅನುಪಾಲನಾ ಸಭೆಯನ್ನು 15 ದಿನಗಳ ನಂತರ ಏರ್ಪಡಿಸಲಾಗುತ್ತಿದ್ದು, ಸದರಿ ಸಭೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿಸುವ ಸಂಬಂಧ ಕ್ರಿಯಾ ಯೋಜನೆಯೊಂದಿಗೆ ಬರುವಂತೆ ನೋಡಲ್ ಅಧಿಕಾರಿಗಳು ಮತ್ತು ಡಿಡಿಪಿಐ ರವರಿಗೆ ತಿಳಿಸಿದರು.

ಡಿಡಿಪಿಐ ಲೋಕೇಶ್ ಜಿ., ಡಯಟ್ ಪ್ರಾಂಶುಪಾಲರಾದ ಯೋಗೇಶ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಜಿಲ್ಲೆಯ ಎಲ್ಲ ಬಿಇಒಗಳು, ಬಿ.ಆರ್.ಸಿ ಮತ್ತು ಸಿ.ಆರ್.ಸಿ. ಹಾಜರಿದ್ದರು.

‘ಮಾದರಿ ಪರೀಕ್ಷೆ ನಡೆಸಿ’

ಜಿಲ್ಲೆಯ ಎಲ್ಲ 253 ಹೈಸ್ಕೂಲ್ ಗಳಲ್ಲಿಯೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ‘ಮಾದರಿ ಪರೀಕ್ಷೆ’ಗಳನ್ನು ಮಾಡಬೇಕು. ಸದರಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಅಂತರ ತಾಲ್ಲೂಕು ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಲು ಸಿಇಒ ಕೆ.ಆರ್‌. ನಂದಿನಿ ಸೂಚಿಸಿದರು. ಪರೀಕ್ಷೆ ಆರಂಭವಾಗಲೂ ಇನ್ನೂ 90 ದಿನಗಳು ಬಾಕಿ ಇದ್ದು ಎಲ್ಲ ದಿನಗಳಲ್ಲಿಯೂ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಗೊಳಿಸಲು ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಸಿಬ್ಬಂದಿ ಶಿಕ್ಷಕರು ಕಾರ್ಯಪವೃತ್ತರಾಗಬೇಕು. ಪ್ರತಿ ದಿನ 2 ವಿಷಯಗಳಂತೆ ಪರೀಕ್ಷೆ ಹಮ್ಮಿಕೊಳ್ಳಬೇಕು ಎಂದು ಹೇಳಿದರು. 

‘ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ

ನೋಡಲ್ ಅಧಿಕಾರಿಗಳು ಬಿಇಒ ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಿಗಳ ‘ವಾಟ್ಸ್‌ಆ್ಯಪ್‌ ಗ್ರೂಪ್‌’ ರಚಿಸಿ ಜಿ.ಪಂ. ಕಚೇರಿಯಿಂದ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದ್ದು ಇಂದಿನಿಂದಲೇ ಎಲ್ಲ ನೋಡಲ್ ಅಧಿಕಾರಿಗಳು ಕಾರ್ಯಪ‍್ರವೃತ್ತರಾಗಿ ಶಾಲಾ ಭೇಟಿಯ ಛಾಯಾಚಿತ್ರಗಳು ಫಲಿತಾಂಶ ಉತ್ತಮಗೊಳಿಸಲು ಸಲಹೆಗಳು ಫಲಿತಾಂಶ ಉತ್ತಮಗೊಳಿಸಲು ಹಮ್ಮಿಕೊಳ್ಳಲಾಗಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.