ADVERTISEMENT

ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಒಪ್ಪಲ್ಲ: ಸುಮಲತಾ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 15:34 IST
Last Updated 3 ನವೆಂಬರ್ 2023, 15:34 IST
<div class="paragraphs"><p>ಸುಮಲತಾ</p></div>

ಸುಮಲತಾ

   

ಮಂಡ್ಯ: ‘ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶವನ್ನು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನಿರಾಕರಿಸಿದ್ದೆ. ನನಗೆ ಮಂಡ್ಯ ಜನ ಸ್ಥಾನಮಾನ ಕೊಟ್ಟಿದ್ದಾರೆ, ಈಗಲೂ ನನ್ನ ಜೊತೆಗೇ ಇದ್ದಾರೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಬಂದರೆ ಒಪ್ಪುವುದಿಲ್ಲ’ ಎಂದು ಸಂಸದೆ ಸುಮಲತಾ ಶುಕ್ರವಾರ ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ನೂರಾರು ಬಾರಿ ಹೇಳಿದ್ದೇನೆ. ಇದನ್ನು ರಕ್ತದಲ್ಲಿ ಬರೆದುಕೊಡಬೇಕಾ? ಮಂಡ್ಯ ಜಿಲ್ಲೆಯ ರಾಜಕಾರಣ ಸದಾ ಸವಾಲಾಗಿರುತ್ತದೆ. ಸವಾಲುಗಳನ್ನು ಎದುರಿಸಲು ನಾನು ಸಿದ್ಧಳಾಗಿದ್ದೇನೆ. ಬಿಜೆಪಿ– ಜೆಡಿಎಸ್‌ ಮೈತ್ರಿ ಆಗಿರಬಹುದು, ಆದರೆ ಇನ್ನೂ ಕ್ಷೇತ್ರಗಳ ಹಂಚಿಕೆಯಾಗಿಲ್ಲ’ ಎಂದರು.

ADVERTISEMENT

ಸಿ.ಎಂ ಬದಲಾವಣೆ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೇರೆ ಪಕ್ಷಗಳ ಅಂತರಿಕ ವಿಚಾರ ಕುರಿತು ಮಾತನಾಡುವುದಿಲ್ಲ. ಆದರೆ, ರಾಜ್ಯದಲ್ಲಿ ವಿದ್ಯುತ್‌, ನೀರಿನ ಸಮಸ್ಯೆ ಇದೆ. ಕ್ಷೇತ್ರಗಳಿಗೆ ಅನುದಾನ ಸಿಗದೇ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವನ್ನೂ ಉಚಿತವಾಗಿ ಕೊಟ್ಟರೆ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಉಂಟಾಗುತ್ತದೆ. ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಸವಾಲು ಎದುರಿಸುತ್ತಿದೆ’ ಎಂದರು.

‘ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ರಾಜ್ಯದ ವಿರುದ್ಧವಾಗಿಯೇ ಆದೇಶಗಳು ಬರುತ್ತಿವೆ. ರಾಜ್ಯದ ಪರವಾಗಿ ವಾದ ಮಾಡುವಲ್ಲಿ ನಾವು ವಿಫಲರಾಗುತ್ತಿದ್ದೇವೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಹೋರಾಟವನ್ನು ನಾವು ಜವಾಬ್ದಾರಿಯಿಂದ ಮುಂದುವರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.