ಮಂಡ್ಯ: ಕಳೆದ ಆರು ತಿಂಗಳಿಂದ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಕಚೇರಿ ಸೋಮವಾರ ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿ ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೇರಿದ ಹೊರಗುತ್ತಿಗೆ ನೌಕರರು ಮುಂದಿನ ಎರಡು ದಿನಗಳೊಳಗೆ ವೇತನ ಪಾವತಿ ಮಾಡದಿದ್ದರೆ ಎಲ್ಲ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ವೇತನ ಪಾವತಿಯಾಗುವವರೆಗೆ ಅಸಹಕಾರ ಚಳವಳಿ ನಡೆಸುವ ಎಚ್ಚರಿಕೆ ನೀಡಿದರು.
ರಾಜ್ಯಾದ್ಯಂತ 3,632 ನೌಕರರು ಮನರೇಗಾ ಯೋಜನೆಯಡಿ ವಿವಿಧ ಹಂತಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕರರಿಗೆ ಕಳೆದ ಜನವರಿಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮಸ್ಯೆ ತೋಡಿಕೊಂಡರು.
ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲವೆಂದು ಇಲ್ಲಿಯವರೆಗೆ ಮಾಹಿತಿ ನೀಡುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರಿಯದೇ ಇರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ವೇತನ ಪಾವತಿಯಾಗದಿದ್ದರೆ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಬಾಬು, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್. ರವಿಕುಮಾರ್, ಹೇಮಂತ್, ರಮೇಶ್, ಮುನಿರಾಜು, ಕುಸುಮಾ, ಜಗದೀಶ್, ಕಿರಣ್‍ಕುಮಾರ್, ಸರಳಾ, ಆಶಾ, ಕೌಶಲ್ಯ, ಸಂಧ್ಯಾ. ರಶ್ಮಿ, ಶಿಲ್ಪ, ವೀಣಾ, ಶ್ವೇತಾ, ಕಲ್ಪನಾ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.