
ಮಳವಳ್ಳಿ: ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವುದು, ಅಪರಾಧ ತಡೆಗಟ್ಟಲು ಮಕ್ಕಳಲ್ಲಿ ಅರಿವು ಮೂಡಿಸಿ ಕಾನೂನು ತಿಳಿವಳಿಕೆಗೆ ತೆರೆದ ಮನೆ ಸಹಕಾರಿಯಾಗಿದೆ ಎಂದು ಗ್ರಾಮಾಂತರ ಠಾಣೆ ಸಿಪಿಐ ಬಸವರಾಜು ತಿಳಿಸಿದರು.
ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ಗುರುವಾರ ಆಗಮಿಸಿದ ವಿವಿಧ ಶಾಲೆಗಳ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಪ್ರಯೋಜನಗಳನ್ನು ತಿಳಿಸಿಕೊಟ್ಟರು.
‘ಸರ್ಕಾರ ಇಂಥ ಕಾರ್ಯಕ್ರಮವನ್ನು ರೂಪಿಸಿ ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಿಳಿಸುವ ಉದ್ದೇಶವಾಗಿದೆ. ಶಾಲಾಭಿವೃದ್ಧಿ, ಮಕ್ಕಳ ಸುರಕ್ಷತೆ ಮತ್ತು ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸಲು ಆಯೋಜಿಸಲು ಇದು ಸಹಕಾರವಾಗಿದೆ. ಪೋಕ್ಸೊ ಕಾಯ್ದೆ ತುಂಬ ಕಠಿಣವಾದದ್ದು. ಈ ಕಾಯ್ದೆ ಕುರಿತು ಮಕ್ಕಳು ಸೇರಿ ಎಲ್ಲ ಜನತೆ ಅರಿವು ಹೊಂದಬೇಕು’ ಎಂದು ಸಲಹೆ ನೀಡಿದರು.
‘ತೆರೆದ ಮನೆ ಕಾರ್ಯಕ್ರಮದಡಿ ಶಾಲಾ ಮಕ್ಕಳನ್ನು ಠಾಣೆಗೆ ಕರೆತಂದು ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಗುತ್ತದೆ. ಕೆಲವು ಶಾಲೆಗಳಿಗೆ ಪೊಲೀಸರೇ ಭೇಟಿ ನೀಡಿ ಕಾನೂನಿನ ಅರಿವು ಮೂಡಿಸಲಾಗುತ್ತದೆ. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಬಾಂಧವ್ಯ ವೃದ್ಧಿ ಮತ್ತು ಶಾಲಾ ಹಂತದಲ್ಲಿ ಮಕ್ಕಳಿಗೆ ಕಾನೂನು ಬಗ್ಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎಂಬುದು ಕಾರ್ಯಕ್ರಮದ ಮೂಲ ಉದ್ದೇಶ’ ಎಂದು ಹೇಳಿದರು.
ಮಕ್ಕಳ ಸಹಾಯವಾಣಿ, ಪೊಕ್ಸ್ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು.
ಶಾಲಾ ಮಕ್ಕಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಪೊಲೀಸರ ದೈನಂದಿನ ಕೆಲಸ, ಗಸ್ತು ತಿರುಗುವಿಕೆ ಮತ್ತು ಇತರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.