
ಶ್ರೀರಂಗಪಟ್ಟಣ: ‘ಜೀವ ಸಂಕುಲ ಮತ್ತು ಮಣ್ಣಿನ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಪದ್ದತಿ ಅನುಸರಿಸುವ ಅಗತ್ಯವಿದೆ’ ಎಂದು ಸಾವಯವ ಕೃಷಿಕ ಮಹದೇವಪುರ ಚೆಂದಾವರೆಗೌಡ ಹೇಳಿದರು.
ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ‘ಅಗ್ರಿ ಟೂರಿಸಂ ಪರಿಕಲ್ಪನೆ’ ಸಾಕಾರಗೊಳಿಸಿರುವ ರೈತ ವೆಂಕಟೇಶ್ ಅವರ ಸಮಗ್ರ ಕೃಷಿ ಪದ್ದತಿ ತೋಟದಲ್ಲಿ ಕೃಷಿಕ ಸಮಾಜದ ತಾಲ್ಲೂಕು ಘಟಕ ಹಾಗೂ ಕೃಷಿ ಇಲಾಖೆ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ರಸಗೊಬ್ಬರ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಬಹುದು. ಆದರೆ ಕೃಷಿ ಉತ್ಪನ್ನಗಳ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಮತ್ತು ಬೇಡಿಕೆ ಇದೆ. ದೇಸಿ ತಳಿಯ ಬಿತ್ತನೆ ಬೀಜಗಳ ಬಳಕೆ, ಜೀವಾಮೃತ ಮತ್ತು ಬೀಜಾಮೃತ ಬಳಸುವ ಮೂಲಕ ಮಣ್ಣಿನ ಸತ್ವ ಕಾಪಾಡಬೇಕು’ ಎಂದು ತಿಳಿಸಿದರು.
ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸ್ವಾಮಿಶೆಟ್ಟಿ ಮಾತನಾಡಿ, ‘ಚೌಧರಿ ಚರಣ್ ಸಿಂಗ್ ರೈತ ಪರವಾದ ಹಲವು ಕಾಯಿದೆಗಳನ್ನು ಜಾರಿಗೆ ತಂದರು. ರಸಗೊಬ್ಬರಕ್ಕೆ ಸಬ್ಸಿಡಿ ನೀಡಿದರು. ಕೃಷಿ ಕ್ಷೇತ್ರ ಸ್ವಾವಲಂಬನೆ ಸಾಧಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡರು. ಆ ಕಾರಣಕ್ಕೆ ಅವರ ಹೆಸರಿನಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದರು.
ಕೃಷಿಕ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಧನಂಜಯ ದರಸಗುಪ್ಪೆ ಪ್ರಾಸ್ತಾವಿಕ ಮಾತುಗಳಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಕಡತನಾಳು ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತರಾದ ಮಹದೇವಪುರ ಚೆಂದಾವರೆಗೌಡ, ಕೆ.ಶೆಟ್ಟಹಳ್ಳಿ ಭೈರಪ್ಪ, ಪಾಲಹಳ್ಳಿ ನಂಜೇಗೌಡ, ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಕೃಷಿ ಅಧಿಕಾರಿ ರಾಮೇಗೌಡ, ಕೃಷಿ ಸಮಾಜದ ಪದಾಧಿಕಾರಿಗಳಾದ ಎ. ಕುಮಾರ್, ಚಂದ್ರೇಗೌಡ, ಬಾಲಕೃಷ್ಣ, ಈಶ್ವರ ಪ್ರಸಾದ್, ಯೋಗಾನರಸಿಂಹ, ಕಿರಂಗೂರು ಕುಮಾರ್, ನಾಗರಾಜು, ರೇಷ್ಮೆ ಕೃಷಿಕ ಕೃಷ್ಣೇಗೌಡ, ಮೇಳಾಪುರ ಜಯರಾಂ, ಪಿ.ಡಿ. ತಿಮ್ಮಪ್ಪ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.