
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಯಲ್ಲಿ ರೈತ ಶ್ಯಾದನಹಳ್ಳಿ ಚಲುವರಾಜ ಅವರ ಜೋಡೆತ್ತು ಗಮನಸೆಳೆಯುತ್ತಿವೆ
ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಜೋಡೆತ್ತುಗಳ ಪ್ರದರ್ಶನ ಮತ್ತು ಮಾರಾಟ ಬಲು ಜೋರಾಗಿ ನಡೆಯುತ್ತಿದ್ದು, ಜಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ. ಜೋಡೆತ್ತುಗಳು ಕಣ್ಮನ ಸೆಳೆಯುತ್ತಿವೆ.
ಬೇಬಿಬೆಟ್ಟದ ಮೈಸೂರು ಮಹಾರಾಜರ ಜಾತ್ರೆ ಮಾಳ ಜನ–ಜಾನುವಾರುಗಳಿಂದ ತುಂಬಿತುಳುಕುತ್ತಿದೆ. ಸ್ಥಳೀಯ, ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ಸುಮಾರು 2ಸಾವಿರಕ್ಕೂ ಹೆಚ್ಚು ಹಳ್ಳಿಕಾರ್ ಜೋಡೆತ್ತುಗಳು ಬಂದು ಸೇರಿವೆ. ರೈತರು ತಮ್ಮ ಒಡನಾಡಿಯಂತೆ ಪ್ರೀತಿಯಿಂದ ಸಾಕಿರುವ ಎತ್ತುಗಳನ್ನು ಕೆಲವರು ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದರೆ, ಮತ್ತೆ ಕೆಲವರು ಮಾರಾಟಕ್ಕೆ ಇಟ್ಟಿದ್ದಾರೆ. ರೈತರ ದಂಡೇ ಜಾತ್ರೆಗೆ ಬಂದು ಜೋಡೆತ್ತುಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಾರಾಟ ಜೋರು: ಜಾತ್ರೆಯಲ್ಲಿ ₹ 3ಲಕ್ಷದಿಂದ ಹಿಡಿದು 18 ಲಕ್ಷದವರೆಗಿನ ಹಳ್ಳಿಕಾರ್ ಜೋಡೆತ್ತುಗಳಿವೆ. ಶ್ಯಾದನಹಳ್ಳಿ ರೈತ ಚಲುವರಾಜು ಅವರು ಶಿರಾದಿಂದ 2 ಹಲ್ಲಿನ ಜೋಡೆತ್ತುಗಳನ್ನು ಕಳೆದ 2 ವರ್ಷಗಳ ಹಿಂದೆ ₹4 ಲಕ್ಷಕ್ಕೆ ತಂದಿದ್ದರು. ಈಗ 6 ಹಲ್ಲಾಗಿರುವ ಈ ಎತ್ತುಗಳ ಬೆಲೆ ₹6ಲಕ್ಷ. ಚನ್ನಪಟ್ಟದ ಮತ್ತಿಕೆರೆ ಗ್ರಾಮದಿಂದ ಬಂದಿರುವ ರೈತ ಶರತ್ ಕುಮಾರ್ ಅವರ 8 ಹಲ್ಲಿನ ಜೋಡೆತ್ತುಗಳ ದರ ₹18 ಲಕ್ಷಗಳು. ಇವರು ಈ ಎತ್ತುಗಳನ್ನು ತುಮಕೂರಿನ ರೈತ ಸುಧಾಕರ್ ಅವರಿಂದ ತಂದಿದ್ದಾರೆ. ಹಾರೋಹಳ್ಳಿಯ ರೈತ ರವಿ ಅವರ 3 ರೀತಿಯ ಒಂಟಿ ಬೀಜದ ಹೋರಿಗಳು ಗಮನ ಸೆಳೆಯುತ್ತಿವೆ.
ಎತ್ತುಗಳನ್ನು ಕೊಳ್ಳಲು ರೈತರು ಮತ್ತು ರೈತರ ನಡುವೆ ವ್ಯಾಪಾರದ ಒಪ್ಪಂದ ಏರ್ಪಡುತ್ತದೆ. ಕೆಲವೊಮ್ಮೆ ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ವ್ಯಾಪಾರ ಒಪ್ಪಂದವಾಗುತ್ತದೆ. ಎತ್ತುಗಳೊಂದಿಗೆ ಒಡನಾಟವಿರುವ ರೈತ ಮಾರಾಟ ಮಾಡಿ ಎತ್ತುಗಳನ್ನು ಬೀಳ್ಕೊಡುವಾಗ ರೈತನ ಕಣ್ಣಿನಲ್ಲಿ ಕಣ್ಣೀರು ಜಿನುಗುತ್ತದೆ.
ಆಕರ್ಷಣೆಯ ಎತ್ತುಗಳ ಅರಮನೆ: ಜಾತ್ರೆಯಲ್ಲಿ ಮೈಸೂರಿನ ಒಂಟಿಕೊಪ್ಪಲಿನ ರೈತ ಪೈಲ್ವಾನ್ ಪ್ರಕಾಶ್ ಅವರು ಎತ್ತುಗಳ ಕೊಟ್ಟಿಗೆಯನ್ನು ಅರಮನೆ ಮಾದರಿಯಲ್ಲಿಯೇ ನಿರ್ಮಿಸಿ 4 ಜೋಡಿ ಜೋಡೆತ್ತುಗಳನ್ನು ಕಟ್ಟಿದ್ದಾರೆ. ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಜಾತ್ರೆಯಲ್ಲಿ ಎತ್ತುಗಳ ಹಗ್ಗ, ಮೂಗುದಾರ, ಗಂಟೆ,ನೊಗ ಹಾಗೂ ಒನಕೆ ಮಾರಾಟ ಭರದಿಂದ ಸಾಗಿದೆ.
ಸಾಕುವ ಪರಂಪರೆ...
ಜಾತ್ರೆಯಲ್ಲಿ ಸೇರಿರುವ ಜೋಡೆತ್ತುಗಳ ರೈತರು ಎತ್ತುಗಳನ್ನು ಸಾಕುವ ಪರಂಪರೆಯನ್ನೇ ಹೊಂದಿದ್ದಾರೆ. ತಮ್ಮ ತಂದೆ ಚಲುವೇಗೌಡರ ಕಾಲದಿಂದಲೂ ಜೋಡೆತ್ತುಗಳನ್ನು ಸಾಕಿರುವ ರೈತ ಶ್ಯಾದನಹಳ್ಳಿ ಚಲುವರಾಜು ಅವರದ್ದು 60 ವರ್ಷಗಳ ಪರಂಪರೆಯದ್ದು ಜೋಡೆತ್ತುಗಳನ್ನು ಕೊಂಡುಕೊಳ್ಳುವುದು ಸಾಕುವುದು ಪ್ರದರ್ಶನಕ್ಕಿಡುವುದು ಮಾರಾಟ ಮಾಡುವುದು ಅವರ ಹವ್ಯಾಸವಾಗಿದೆ. ಎತ್ತುಗಳಿಗೆ ನಿತ್ಯ ಸ್ನಾನ ಮಾಡಿಸುವುದು. ಮೇವಿನ ಜತೆಗೆ ರವೆ ಗಂಜಿ ಕಡ್ಲೆಕಾಯಿ ಬೂಸ ಹಿಂಡಿ ಹಲ್ಲುಜೋಳ ಬೆಣ್ಣೆ ಸೇರಿದಂತೆ ವಿವಿಧ ರೀತಿಯ ತಿಂಡಿಗಳನ್ನು ತಿನಿಸಿ ಪ್ರೀತಿಯಿಂದ ಸಾಕುತ್ತಿದ್ದಾರೆ. ಜಾತ್ರೆಗೆ ಬಂದು ಸೇರಿರುವ ಸಾವಿರಾರು ರೈತರು ಎತ್ತುಗಳನ್ನು ಇದೇ ರೀತಿಯಲ್ಲಿ ಸಾಕಿದ್ದಾರೆ.
ಬಹುಮಾನಕ್ಕಾಗಿ ನೋಂದಣಿ...
ಫೆ.15ರಂದು ಆರಂಭವಾಗಿರುವ ಜಾತ್ರೆಯಲ್ಲಿ 92 ಜೋಡೆತ್ತುಗಳು ಹಾಗೂ 75 ಹಸುಗಳು ಬಹುಮಾನಕ್ಕಾಗಿ ಪಶುವೈದ್ಯಕೀಯ ಇಲಾಖೆಯಲ್ಲಿ ನೋಂದಣಿಯಾಗಿವೆ. ಫೆ.21ರಂದು ತಜ್ಞರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಫೆ.23ರಂದು ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.