ADVERTISEMENT

ಪಾಂಡವಪುರ–ಮಂಡ್ಯ ರಸ್ತೆ ಗುಂಡಿಮಯ

ವಾಹನ ಸವಾರರು, ಪ್ರಯಾಣಿಕರಿಗೆ ತೀವ್ರ ತೊಂದರೆ, ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯ

ಹಾರೋಹಳ್ಳಿ ಪ್ರಕಾಶ್‌
Published 15 ನವೆಂಬರ್ 2020, 2:03 IST
Last Updated 15 ನವೆಂಬರ್ 2020, 2:03 IST
ಪಾಂಡವಪುರ–ಮಂಡ್ಯ ಸಂಪರ್ಕದ ಚಿಕ್ಕಬ್ಯಾಡರಹಳ್ಳಿ ಬಳಿಯ ಮುಖ್ಯರಸ್ತೆ ಹಾಳಾಗಿದ್ದು, ಎತ್ತಿನಗಾಡಿಗಳು, ವಾಹನಗಳು ಸಂಚರಿಸಲು ತೊಂದರೆಯಾಗಿದೆ (ಎಡಚಿತ್ರ). ದೊಡ್ಡಬ್ಯಾಡರಹಳ್ಳಿ ರೈಲ್ವೆ ಮೇಲ್ಸೇತುವೆ ಬಳಿಯ ಪಾಂಡವಪುರ–ಮಂಡ್ಯ ಮುಖ್ಯರಸ್ತೆ ಸ್ಥಿತಿ ಇದು
ಪಾಂಡವಪುರ–ಮಂಡ್ಯ ಸಂಪರ್ಕದ ಚಿಕ್ಕಬ್ಯಾಡರಹಳ್ಳಿ ಬಳಿಯ ಮುಖ್ಯರಸ್ತೆ ಹಾಳಾಗಿದ್ದು, ಎತ್ತಿನಗಾಡಿಗಳು, ವಾಹನಗಳು ಸಂಚರಿಸಲು ತೊಂದರೆಯಾಗಿದೆ (ಎಡಚಿತ್ರ). ದೊಡ್ಡಬ್ಯಾಡರಹಳ್ಳಿ ರೈಲ್ವೆ ಮೇಲ್ಸೇತುವೆ ಬಳಿಯ ಪಾಂಡವಪುರ–ಮಂಡ್ಯ ಮುಖ್ಯರಸ್ತೆ ಸ್ಥಿತಿ ಇದು   

ಪಾಂಡವಪುರ: ತಾಲ್ಲೂಕಿನ ಚಿಕ್ಕಬ್ಯಾಡರಹಳ್ಳಿ, ದೊಡ್ಡಬ್ಯಾಡರಹಳ್ಳಿ ಗ್ರಾಮಗಳ ಬಳಿ ಪಾಂಡವಪುರ–ಮಂಡ್ಯ ಸಂಪರ್ಕ ಮುಖ್ಯರಸ್ತೆಯಲ್ಲಿ ದೊಡ್ಡಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಈ ರಸ್ತೆಯಲ್ಲಿ ನಿತ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಕಾರು, ಬೈಕ್‌, ಲಾರಿ, ಟ್ರಾಕ್ಟರ್‌, ಗೂಡ್ಸ್‌ ಗಾಡಿಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಮಂಡ್ಯದಿಂದ ಪಾಂಡವಪುರಕ್ಕೆ, ಪಾಂಡವಪುರದಿಂದ ಮಂಡ್ಯಕ್ಕೆ ಬರುವವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ, ಹದ ಗೆಟ್ಟಿರುವ ಈ ರಸ್ತೆಯಲ್ಲಿ ಸಂಚರಿಸುವ ವೇಳೆಗೆ ಸಾಕಾಗಿ ಹೋಗುತ್ತದೆ ಎಂಬುದು ಪ್ರಯಾಣಿಕರು ಹಾಗೂ ವಾಹನ ಸವಾರರ ಅಳಲು.

ಕನಗನರಮರಡಿ ಗೇಟ್‌ನಿಂದ ಚಿಕ್ಕ ಬ್ಯಾಡರಹಳ್ಳಿವರೆಗಿನ ರಸ್ತೆ, ತಿಮ್ಮನ ಕೊಪ್ಪಲು ಗ್ರಾಮದಿಂದ ದೊಡ್ಡಬ್ಯಾಡರ ಹಳ್ಳಿ ಗ್ರಾಮದ ಪ್ರವೇಶದವರೆಗೆ ಹಾಗೂ ದೊಡ್ಡಬ್ಯಾಡರಹಳ್ಳಿ ರೈಲ್ವೆ ನಿಲ್ದಾಣ ಬಳಿಯಿಂದ ರೈಲ್ವೆ ಮೇಲ್ಸೇತುವೆವರೆಗಿನ ರಸ್ತೆಗಳು ಹಾಳಾಗಿವೆ. ಮಳೆ ಬಿದ್ದರಂತೂ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪ ಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು.

ADVERTISEMENT

‘ಇದೇನ್‌ ರಸ್ತೆ ಸ್ವಾಮಿ, ಬೈಕ್‌ನಲ್ಲಿ ಓಡಾಡೋದಕ್ಕೆ ಆಗುತ್ತಾ’ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ ಬೈಕ್ ಸವಾರರಾದ ಶ್ರೀಕಾಂತ್, ಮದನ್‌ಕುಮಾರ್.

‘ನ‌ಮ್ಮೂರಿನ ಮೂಲಕ ಹಾದುವ ಹೋಗುವ ಪಾಂಡವಪುರ–ಮಂಡ್ಯ ಮುಖ್ಯರಸ್ತೆ ಹಾಳಾಗಿದೆ. ಸಂಚಾರ ಕಷ್ಟಕರವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚಿಕ್ಕಬ್ಯಾಡರಹಳ್ಳಿ ಪ್ರಕಾಶ್, ತಮ್ಮೇಗೌಡ.

‘ರೈಲ್ವೆ ನಿಲ್ದಾಣ, ಮೇಲ್ಸೇತುವೆ ಬಳಿಯ ರಸ್ತೆ ತುಂಬ ಕೆಟ್ಟು ಹೋಗಿದೆ. ಬೈಕ್‌ಗಳು, ಬಸ್‌, ಕಾರು ಸೇರಿದಂತೆ ಯಾವುದೇ ವಾಹನ ಓಡಾಡಲು ಹರಸಾಹಸ ಪಡಬೇಕಾಗಿದೆ. ಈ ರಸ್ತೆಯನ್ನು ಕೂಡಲೇ ದುರಸ್ತಿಪಡಿಸ ಬೇಕು’ ಎಂದು ದೊಡ್ಡ ಬ್ಯಾಡರಹಳ್ಳಿ ಗ್ರಾಮದ ಚನ್ನೇಗೌಡ, ಶಿವಣ್ಣ ಆಗ್ರಹಿಸಿದರು.

‘₹8 ಕೋಟಿ ವೆಚ್ಚದಲ್ಲಿ ದುರಸ್ತಿ’

‘ತಾಲ್ಲೂಕಿನ ಕನಗನಮರಡಿ ಗೇಟ್‌ನಿಂದ ದೊಡ್ಡಬ್ಯಾಡರಹಳ್ಳಿ ರೈಲ್ವೆ ಮೇಲ್ಸೇತುವೆವರೆಗಿನ ಮುಖ್ಯರಸ್ತೆಯನ್ನು ₹8 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. 2016–17ರಲ್ಲೇ ಈ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದೆ. ಈಗ ಟೆಂಡರ್ ಪ್ರಕ್ರಿಯೆಯೆ ಮುಗಿದಿದ್ದು, ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಗುರುಮಲ್ಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.