ಪಾಂಡವಪುರ: ಬೀದಿ ದೀಪಕ್ಕೆ ಎಲ್‌ಇಡಿ ಬಲ್ಪ್‌ಗಳನ್ನು ಪುರಸಭೆ ಖರೀದಿಸಿದ್ದು, ಮಾರುಕಟ್ಟೆ ದರಕ್ಕಿಂತ ದುಬಾರಿಯಾಗಿದೆ. 1 ಎಚ್‌ಪಿ ಮೋಟಾರ್ ದುರಸ್ತಿಗೆ ₹1 ಲಕ್ಷ ಹಣ ವ್ಯಯಿಸಲಾಗಿದೆ. ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.
ಗುರುವಾರ ಜ್ಯೋತಿಲಕ್ಷ್ಮಿ ಬಾಬು ಅಧ್ಯಕ್ಷತೆ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು.
ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು 90 ವಾಟ್‌ಗಳ 108 ಎಲ್‌ಇಡಿ ಬಲ್ಪ್‌ಗಳನ್ನು ಖರೀದಿಸಲಾಗಿದ್ದು, ಇದಕ್ಕೆ ಪುರಸಭೆ ₹6 ಲಕ್ಷ ಪಾವತಿಸಿದೆ. ಈ ಬಲ್ಪ್‌ಗಳ ಮಾರುಕಟ್ಟೆ ದರ ಕೇವಲ ₹ 2ಸಾವಿರ ಇದ್ದು 1 ಬಲ್ಪ್‌ಗೆ ₹5ಸಾವಿರಕ್ಕೂ ಹೆಚ್ಚು ನೀಡುತ್ತಿರುವುದನ್ನು ನೋಡಿದರೆ ಇದರಲ್ಲಿ ಲಕ್ಷಾಂತರ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಅನುಮಾನವಿದೆ. ಖರೀದಿಸಿರು ಎಲ್ಲಾ ಬಲ್ಪ್‌ಗಳನ್ನು ಹಿಂದಿರುಗಿಸಬೇಕು ಎಂದರು. 1 ಎಚ್‌ಪಿ ಮೋಟಾರ್ ದುರಸ್ತಿಗೆ ₹1.8ಲಕ್ಷ ನೀಡಲಾಗಿದ್ದು, ಹಣ ದುರುಪಯೋಗವಾಗಿದೆ. ಪುರಸಭೆ ವಕೀಲರಿಗೆ ₹ 45ಸಾವಿರ ಯಾತಕ್ಕಾಗಿ ಪಾವತಿಸಲಾಗಿದೆ ಎಂದು ಮಾಹಿತಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಚಂದ್ರು ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಸ ಸಂಸ್ಕರಣ ಮತ್ತು ಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಲಾಗಿದೆ. ಇದರ ನಿರ್ವಹಣೆ ಸರಿಯಿಲ್ಲ. ಲಾಭ ತೋರಿಸುತ್ತಿಲ್ಲ. ಆದೂ 2 ತಿಂಗಳಿಗೆ ₹ 90ಸಾವಿರ ವಿದ್ಯುತ್ ಬಿಲ್ ಬಂದಿದೆ. ಅಲ್ಲಿನ ಓವರ್ ಹೆಡ್ ಟ್ಯಾಂಕಿಗೆ ಹನಿ ನೀರು ಬಿಂದಿಲ್ಲ. ಅಧಿಕಾರಿಗಳು ಸಂಪೂರ್ಣ ಬೇಜಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿ ವಾಹನಗಳನ್ನು ದುರಸ್ತಿ ಮಾಡಿಸದೆ ತುಕ್ಕು ಹಿಡಿಸುತ್ತಿದ್ದಾರೆ. ಇವುಗಳಿಗೆ ₹2ಲಕ್ಷ ವಿಮೆ ಮಾಡಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಉಪಾಧ್ಯಕ್ಷ ಎಲ್.ಅಶೋಕ್ ಹಾಗೂ ಸದಸ್ಯರು ಹಾಜರಿದ್ದರು.
ಅಧಿಕಾರಿಗಳು ಸಮರ್ಪಕ ಮಾಹಿತಿ ಕೊಡುವುದಿಲ್ಲ. ಒಂದೊಂದು ವಿಭಾಗದ ಅಧಿಕಾರಿಗಳು ಜವಾಬ್ದಾರಿ ನಿಭಾಯಿಸುತ್ತಿಲ್ಲ. ತಪ್ಪುಗಳು ನಡೆಯುತ್ತಿವೆ. ಅಧ್ಯಕ್ಷೆ ಆಗಿದ್ದರೂ ಏನು ಮಾಡೋಕೊ ಆಗುತ್ತಿಲ್ಲ’ಜ್ಯೋತಿ ಲಕ್ಷ್ಮಿ ಬಾಬು ಅಧ್ಯಕ್ಷೆ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.