ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಫಲ ಪ್ರದಾಯಿನಿ ಪಾರ್ವತಿದೇವಿಯ 48 ಗಂಟೆಗೆ ಅಖಂಡ ಮಹಾ ಯಾಗಕ್ಕೆ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಆಶ್ರಮದ ಆವರಣದಲ್ಲಿರುವ ಕಾಶಿ ಚಂದ್ರಮೌಳೇಶ್ವರ ಮತ್ತು ಪಾರ್ವತಿ ದೇವಿ ಮಂದಿರದ ಮುಂದೆ ನಿರ್ಮಿಸಿರುವ ಯಾಗ ಕುಂಡಕ್ಕೆ ಪೂಜಾ ವಿಧಿ, ವಿಧಾನಗಳು ನಡೆದವು. ಇದಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸುಮಂಗಲಿಯರಿಂದ ಗಂಗೆ ಪೂಜೆ ನಡೆಯಿತು. ಗೋ ಪೂಜೆ, ಆಲಯ ಪ್ರವೇಶ, ಯಾಗಶಾಲೆಯಲ್ಲಿ ಗಣಪತಿ ಪೂಜೆ, ಕಳಶ ಸ್ಥಾಪನೆ ಇತರ ಕೈಂಕರ್ಯಗಳು ಜರುಗಿದವು. ಅಭಿಜಿನ್ ಲಗ್ನದಲ್ಲಿ ಫಲ ಪ್ರದಾಯಿನಿ ಪಾರ್ವತಿ ದೇವಿಯ ಅಖಂಡ ಬೀಜಾಕ್ಷರಿ ಹೋಮದ ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮಾದಿಗಳು ನಡೆದವು.
ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ವೈದಿಕರು ಯಾಗ ಕುಂಡಕ್ಕೆ ಅವಿಸ್ಸು ಅರ್ಪಿಸಿದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಇತರರು ಯಾಗದಲ್ಲಿ ವ್ರತಧಾರಿಗಳಾಗಿ ಪಾಲ್ಗೊಂಡು ಸಂಕಲ್ಪ ಪೂಜೆ ನೆರವೇರಿಸಿದರು.
ಮಾ.4ರಂದು ಫಲ ಪ್ರದಾಯಿನಿ ಪಾರ್ವತಿ ದೇವಿಗೆ ಅಭಿಷೇಕ, ಪುಷ್ಪಾಲಂಕಾರ ಮತ್ತು ಪೂರ್ಣಾಹುತಿ ನಡೆಯಲಿದೆ. ಪ್ರಾಕೃತಿಕ ವಿಕೋಪ ತಡೆ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಿ 48 ಗಂಟೆಗಳ ಕಾಲ ನಡೆಯುತ್ತಿರುವ ಈ ಅಖಂಡ ಮಹಾ ಯಾಗದ ಪೂರ್ಣಾಹುತಿ ಕಾರ್ಯ ಬಳಿಗ್ಗೆ 11.30ಕ್ಕೆ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು ಮತ್ತು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.