ಮಂಡ್ಯ: ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ತಾಲ್ಲೂಕಿನ ಹಂಪಾಪುರದ ಪಟ್ಲದಮ್ಮ ದೇವಾಲಯಕ್ಕೆ ಹಾಕಿದ್ದ ಬೀಗವನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಿ ಪೂಜೆಗೆ ಅವಕಾಶ ಮಾಡಿಕೊಡಲಾಯಿತು.
ಮುಜರಾಯಿ ಇಲಾಖೆಗೆ ಸೇರಿದ್ದ ಈ ದೇವಾಲಯದ ಪೂಜೆಗೆ ಸಂಬಂಧಿಸಿದಂತೆ ಸುತ್ತಮುತ್ತಲ ಹಬ್ಬದ ಮಾರ್ನಹಳ್ಳಿ, ಕರಡಿಕೊಪ್ಪಲು, ಚೋಕನಹಳ್ಳಿ ಹಾಗೂ ಹಂಪಾಪುರ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ದೇವಾಲಯದ ಗೋಪುರ ನಿರ್ಮಿಸಿ ಅಭಿವೃದ್ಧಿಗೂ ಮುನ್ನ ಯಾರು ಬೇಕಾದರೂ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅವಕಾಶ ಇತ್ತು. ಆದರೆ, ಗೋಪುರ ನಿರ್ಮಿಸಿ ಅಭಿವೃದ್ಧಿಪಡಿಸಿದ ನಂತರ ಪೂಜೆ ಮಾಡುವ ವಿಚಾರದಲ್ಲಿ ನಾಲ್ಕು ಗ್ರಾಮಗಳಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಳೆದ ಒಂದು ತಿಂಗಳ ಹಿಂದೆ ದೇವಾಲಯಕ್ಕೆ ಅಧಿಕಾರಿಗಳು ಬೀಗ ಹಾಕಿದ್ದರು.
ನಾಲ್ಕೂ ಗ್ರಾಮಗಳ ಗ್ರಾಮಸ್ಥರಿಗೆ ದೇವಾಲಯಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಹಾಜರುಪಡಿಸುವಂತೆ ಉಪವಿಭಾಗಾಧಿಕಾರಿ ಶಿವಮೂರ್ತಿ ಸೂಚಿಸಿದರು. ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ಸೋಮವಾರ ದೇವಾಲಯಕ್ಕೆ ತೆರಳಿ ಸುತ್ತಮುತ್ತಲ ಗ್ರಾಮಸ್ಥರು, ಭಕ್ತಾದಿಗಳ ಸಮ್ಮುಖದಲ್ಲಿ ಎಲ್ಲ ಮುಖಂಡರೊಟ್ಟಿಗೆ ಚರ್ಚೆ ನಡೆಸಿ ಅಂತಿಮವಾಗಿ ದೇವಾಲಯದಲ್ಲಿ ಹಿಂದೆ ಇದ್ದ ಪದ್ಧತಿಯಂತೆ ಯಾರು ಬೇಕಾದರೂ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಿ ದೇವಾಲಯದ ಬಾಗಿಲನ್ನು ತೆರೆಸಲು ನಿರ್ಧರಿಸಿದರು.
ಇದಕ್ಕೆ ಎಲ್ಲ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರಾದರೂ, ದೇವರ ಪೂಜೆಗೆಂದೇ ಅರ್ಚಕರೊಬ್ಬರನ್ನು ನೇಮಿಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಇದಕ್ಕೆ ಸಮ್ಮತಿ ಸೂಚಿಸಿ ಪೂಜೆಗೆ ಎಲ್ಲರೂ ಒಪ್ಪಿಕೊಂಡರು. ಇದರಿಂದ ಪಟ್ಲದಮ್ಮ ದೇವಾಲಯದಲ್ಲಿ ಪೂಜೆ ಎಂದಿನಂತೆ ನಡೆಯಲಿದೆ ಎಂದು ಘೋಷಿಸಿದರು.
ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್, ಸಿಪಿಐ ಮಹೇಶ್, ಪಿಎಸ್‍ಐ ದೀಕ್ಷಿತ್, ಗ್ರಾ.ಪಂ. ಸದಸ್ಯ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.