ADVERTISEMENT

ರೈತರ ಒಕ್ಕಲೆಬ್ಬಿಸಿ ವಸಾಹತು ನಿರ್ಮಾಣ ಬೇಡ: ಎಚ್‌.ಡಿ. ಕುಮಾರಸ್ವಾಮಿ

ರೈತರೊಂದಿಗೆ ನಡೆದ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:06 IST
Last Updated 19 ಸೆಪ್ಟೆಂಬರ್ 2020, 13:06 IST
ನಾಗಮಂಗಲ ತಾಲ್ಲೂಕಿನ ಹಟ್ನ ಗೇಟ್ ಬಳಿ ನಡೆದ ಗ್ರಾಮಸ್ಥರು ಮತ್ತು ರೈತ ಸಂಘದ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಾಗಮಂಗಲ ತಾಲ್ಲೂಕಿನ ಹಟ್ನ ಗೇಟ್ ಬಳಿ ನಡೆದ ಗ್ರಾಮಸ್ಥರು ಮತ್ತು ರೈತ ಸಂಘದ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.   

ನಾಗಮಂಗಲ: ‘ಸರ್ಕಾರದ ಭೂಮಿಯಲ್ಲಿ ಮಾತ್ರ ಕೈಗಾರಿಕೆ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಈಗ ಸರ್ಕಾರ ರೈತರ ಫಲವತ್ತಾದ ಭೂಮಿ ವಶಕ್ಕೆ ಪಡೆದು ಕೈಗಾರಿಕಾ ವಸಾಹತು ಸ್ಥಾಪನೆಗೆ ಮುಂದಾಗಿರುವುದಕ್ಕೆ ನನ್ನ ವಿರೋಧವಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಬೆಳ್ಳೂರು ಹೋಬಳಿಯ ಹಟ್ನ ಗೇಟ್ ಬಳಿ ರೈತರ ಪ್ರತಿಭಟನೆಯ ನಂತರ ನಡೆದ ಸಭೆಯಲ್ಲಿ ‌ಮಾತನಾಡಿದ ಅವರು, ‘ಈ ಭಾಗದ ರೈತರು ಯಾವುದೇ ರೀತಿಯ ಆತಂಕ ಪಡುವುದು ಬೇಡ. ತಾಲ್ಲೂಕಿನಲ್ಲಿ ಯುವಕರಿಗೆ ಉದ್ಯೋಗ ಸಿಗಲಿ ಎಂಬ‌ ಕಾರಣಕ್ಕೆ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ನಮ್ಮ ಬಜೆಟ್‌ನಲ್ಲಿ ಅವಕಾಶ ನೀಡಿದ್ದೆವು. ಅದು ಕೂಡ ಬರಡು ಭೂಮಿಯಲ್ಲಿ ಸ್ಥಾಪನೆ ಮಾಡಲು ಮಾತ್ರವೇ ನಮ್ಮ ಉದ್ದೇಶವಾಗಿತ್ತು ಅಷ್ಟೇ. ರೈತರನ್ನು ಸಂಕಷ್ಟಕ್ಕೆ ದೂಡಿದರೆ ನಮಗೆ ದೇವರು ಒಳ್ಳೆಯದನ್ನು ಮಾಡುವುದಿಲ್ಲ‌. ಈಗ 1,227 ಎಕರೆ ಭೂಮಿಯನ್ನು ಸ್ವಾಧೀನ ಮಾಡಿರುವುದು ಆಡಳಿತ ಸರ್ಕಾರದ ನಿರ್ಧಾರವಾಗಿದೆ’ ಎಂದರು.

‘ಭೂಮಿಯನ್ನು ವಶಪಡಿಸಿಕೊಳ್ಳುವ ಮೊದಲು ರೈತರಿಗೆ, ಸ್ಥಳೀಯ ಜನಪ್ರತಿನಿಧಿಗೂ ಮಾಹಿತಿ ನೀಡಿಲ್ಲ. ತಾಲ್ಲೂಕಿನ ಯುವಕರು ಸ್ವಾಭಿಮಾನಿಗಳಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಉದ್ಯೋಗದಲ್ಲೂ ತೊಡಗಿ ಕಷ್ಟಪಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾನು ಮುಖ್ಯಮಂತ್ರಿ ಆಗಿದ್ದಾಗ ಕೈಗಾರಿಕಾ ಪ್ರದೇಶವನ್ನು ಘೋಷಣೆ ಮಾಡಿದ್ದೇವೆ. ಆದರೂ ಈಗಲೂ ತಾಲ್ಲೂಕಿನ ರೈತರ ತೀರ್ಮಾನವೇ ಅಂತಿಮ. ರೈತರ ಬದುಕನ್ನು ‌ಸರಿಪಡಿಸುವುದು ನಮ್ಮ‌ ಕರ್ತವ್ಯವಾಗಿದೆ. ಆದ್ದರಿಂದ ತಾಲ್ಲೂಕಿನ ಯಾವ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಬೇಕು ಎಂಬುದು ರೈತರ ನಿರ್ಧಾರ. ಅದಕ್ಕೆ ನಾವು ಬದ್ಧರಾಗಿ ಹೋರಾಡುವ ಕೆಲಸ ನಾವು ಮಾಡುತ್ತೇವೆ’ ಎಂದು ರೈತರಿಗೆ ಕುಮಾರಸ್ವಾಮಿ ಭರವಸೆ ನೀಡಿದರು.

ADVERTISEMENT

ನಂತರ ಶಾಸಕ ಸುರೇಶ್‌ಗೌಡ ಮಾತನಾಡಿ, ‘ರೈತರ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಇದು ರಾಜಕೀಯ ಮಾಡುವ ಸಮಯವಲ್ಲ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ನಾವು ಮತ್ತು ನಮ್ಮ ಪಕ್ಷ ಧ್ವನಿ ಎತ್ತುತ್ತೇವೆ. ಜೊತೆಗೆ ರೈತರ ಜಮೀನನ್ನು ಮರಳಿಸಲು ಶಕ್ತಿಮೀರಿ ಹೋರಾಟ ಮಾಡುತ್ತೇವೆ’ ಎಂದರು.

ಸಭೆಯಲ್ಲಿ ಬಿಳಗುಂದ, ಹಟ್ನ, ಗರುಡನಹಳ್ಳಿ, ಚೆನ್ನಾಪುರ, ಗೊಲ್ಲರಹಟ್ಟಿ ಮತ್ತು ಕಾಳಿಂಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ 1000ಕ್ಕೂ ಅಧಿಕ ರೈತರು ಭಾಗವಹಿಸಿ ಅಧಿವೇಶನದಲ್ಲಿ ಕೆಐಡಿಬಿ ವತಿಯಿಂದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಸರ್ಕಾರದ ಗಮನಸೆಳೆಯುವಂತೆ ಮತ್ತು ಸಮಸ್ಯೆ ಬಗೆಹರಿಸುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಜೆಡಿಎಸ್ ಮುಖಂಡ ಎಲ್.ಆರ್. ಶಿವರಾಮೇಗೌಡ, ನೆಲ್ಲೀಗೆರೆ ಬಾಲು, ಬಿಳಗುಂದ ವಾಸು, ಜಿ‌.ಟಿ. ಶ್ರೀನಿವಾಸ್, ದಾಸಶೆಟ್ಟಿ, ಕಾಳಿಂಗನಹಳ್ಳಿ ರವಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.