ADVERTISEMENT

ಮದ್ದೂರು: ಅಭಿಷೇಕ್ -ಅವೀವಾ ಬೀಗರ ಔತಣ ಕೂಟದಲ್ಲಿ ಅವ್ಯವಸ್ಥೆ, ಪೊಲೀಸರನ್ನೂ ಲೆಕ್ಕಿಸದ ಜನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 14:09 IST
Last Updated 16 ಜೂನ್ 2023, 14:09 IST
ಮದ್ದೂರಿನ ಗೆಜ್ಜಲಗೆರೆ ಬಳಿ ಅಭಿಷೇಕ್ –ಆವೀವಾ ವಿವಾಹ ಬೀಗರೂಟದಲ್ಲಿ ಬಾಡೂಟಕ್ಕಾಗಿ ಪೊಲೀಸರನ್ನೂ ಲೆಕ್ಕಿಸದೆ ಮುಗಿ ಬಿದ್ದ ಜನರನ್ನು ಪೊಲೀಸರು ನಿಯಂತ್ರಿಸುತ್ತಿರುವುದು
ಮದ್ದೂರಿನ ಗೆಜ್ಜಲಗೆರೆ ಬಳಿ ಅಭಿಷೇಕ್ –ಆವೀವಾ ವಿವಾಹ ಬೀಗರೂಟದಲ್ಲಿ ಬಾಡೂಟಕ್ಕಾಗಿ ಪೊಲೀಸರನ್ನೂ ಲೆಕ್ಕಿಸದೆ ಮುಗಿ ಬಿದ್ದ ಜನರನ್ನು ಪೊಲೀಸರು ನಿಯಂತ್ರಿಸುತ್ತಿರುವುದು   

ಮದ್ದೂರು: ಸಂಸದೆ ಸುಮಲತಾ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ಪತ್ನಿ ಅವೀವಾ  ಇವರ ಬೀಗರ ಔತಣ ಕೂಟ ಹಲವಾರು ಅವ್ಯವಸ್ಥೆಗಳಿಗೆ ಸಾಕ್ಷಿಯಾಯಿತು. ಬಾಡೂಟಕ್ಕಾಗಿ ಮುಗಿ ಬಿದ್ದ ಜನರನ್ನು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ನಿಯಂತ್ರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸಂಸದೆ ಸುಮಲತಾ ಅಂಬರೀಷ್ ಅವರು ಪುತ್ರನ ವಿವಾಹದ ಬೀಗರ ಔತಣ ಕೂಟವನ್ನು  ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೊನಿ ಬಳಿ ನಡೆಸಲು ತೀರ್ಮಾನಿಸಿದ್ದರು. ಸುಮಾರು 50 ಸಾವಿರದಿಂದ 80 ಸಾವಿರ ಜನರಿಗೆ ಮಾಂಸಾಹಾರ ಭೋಜನ ವ್ಯವಸ್ಥೆಯನ್ನು ಮಂಡ್ಯ ಶೈಲಿಯಲ್ಲಿ ಏರ್ಪಾಡು ಮಾಡಿರುವುದಾಗಿ ತಿಳಿಸಿದ್ದರು. ಅದರಂತೆ ಮದ್ದೂರು ಬಳಿಯ ಗೆಜ್ಜಲಗೆರೆ ಬಳಿ ಭಾರಿ ಸಿದ್ಧತೆಗಳನ್ನು ಮಾಡಲಾಗಿತ್ತು. 12 ಎಕರೆ ಜಾಗದಲ್ಲಿ ಜರ್ಮನ್ ಶಾಮಿಯಾನ ಸಹಿತ ವೇದಿಕೆಯನ್ನು ನಿರ್ಮಿಸಲಾಗಿತ್ತು.

ಬೆಳ್ಳಿಗ್ಗೆ 11.45 ಕ್ಕೆ ಸಾವಿರಾರು ಜನರು ತಾಲ್ಲೂಕು, ಜಿಲ್ಲೆ ಸೇರಿದಂತೆ ಹಲವು ಕಡೆಗಳಿಂದ ಬಂದು ಜನಜಂಗುಳಿ ನಿರ್ಮಾಣವಾಗಿತ್ತು. ಊಟಕ್ಕೆ ಕುಳಿತು ಕೊಳ್ಳಲು ಜನರು ಶಾಮಿಯಾನಗಳ ಅಡಿ ಭಾಗಲ್ಲಿಯೂ ನುಗ್ಗಿ ಒಳಬರುತ್ತಿದ್ದಂತೆಯೇ ಪೊಲೀಸರು ಲಾಠಿ ಬಳಕೆ ಮಾಡಿ ನಿಯಂತ್ರಿಸಲು ಮುಂದಾದರು. ಜನರು ಅವರನ್ನೂ ಲೆಕ್ಕಿಸದೇ ಒಳ ನುಗ್ಗಿದ್ದರು.

ADVERTISEMENT

ಮಧ್ಯಾಹ್ನ 2.30 ಆಗುತ್ತಿದ್ದತೆಯೇ ಜನರು  ಮೈದಾನದಲ್ಲಿದ್ದ ಅಡುಗೆ ಮಾಡಿಟ್ಟಿದ್ದ ಪಾತ್ರೆಗಳತ್ತ ಓಡಿದರು. ಆಯೋಜಕರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಆಗಲಿಲ್ಲ.  ಜನರು ಹೋಗಲು, ಬರಲು, ಊಟ ಮಾಡಲು, ವಾಹನಗಳನ್ನು ನಿಲ್ಲಿಸಲು ಯಾವುದೇ ನಿರ್ದಿಷ್ಟ ಸೂಚನಾ ಫಲಕಗಳನ್ನು ಹಾಕಿರಲಿಲ್ಲ. ಮುಂಜಾಗ್ರತಾ ಕ್ರಮಗಳನ್ನು ನಿಭಾಯಿಸಿರಲಿಲ್ಲ.

ಮಂಡ್ಯ ಮೂಲದ ಪ್ರಕಾಶ್ ಎಂಬ ಬಾಣಸಿಗರು ಅಡುಗೆ ಜವಾಬ್ದಾರಿ ಹೊತ್ತಿದ್ದರು. 7 ಟನ್ ಮಟನ್‌ ಮಾಂಸ,10 ಟನ್ ಚಿಕನ್,1 ಟನ್ ರಾಗಿ ಹಿಟ್ಟು ಬಳಸಿ, ನಾಟಿ ಕೋಳಿ ಸಾರು ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ನಂದಿನಿ ಐಸ್ ಕ್ರೀಮ್, ಬೀಡಾ  ಸೇರಿದಂತೆ ಊಟ ಸಿದ್ಧಪಡಿಸಿದ್ದರು.

ಅಭಿಷೇಕ್ –ಆವೀವಾ ವಿವಾಹ, ಮದುವೆಯ ಆರತಕ್ಷತೆಯು ಬೆಂಗಳೂರಿನಲ್ಲಿ ಇತ್ತೀಚೆಗೆ  ನಡೆದಿತ್ತು. ನಟ ಅಭಿಷೇಕ್ ಅಂಬರೀಷ್ - ಅವೀವಾ ದಂಪತಿ, ಸಂಸದೆ ಸುಮಲತಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಸೇರಿದಂತೆ ಹಲವು ಮುಖಂಡರು ಇದ್ದರು.

ಮದ್ದೂರಿನ ಗೆಜ್ಜಲಗೆರೆ ಬಳಿ ಅಭಿಷೇಕ್ –ಆವೀವಾ ವಿವಾಹ ಬೀಗರೂಟದಲ್ಲಿ ಬಾಡೂಟಕ್ಕಾಗಿ ಪೊಲೀಸರನ್ನೂ ಲೆಕ್ಕಿಸದೆ ಮುಗಿ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.