ADVERTISEMENT

ಶ್ರೀರಂಗಪಟ್ಟಣ | ‘ಕಾಮಗಾರಿಯಲ್ಲಿ ಲೋಪವಾಗದಿರಲಿ’

ಅಭಿವೃದ್ಧಿ ಕಾಮಗಾರಿಗೆ ಚಾಲನೆ: ರಮೇಶ ಬಂಡಿಸಿದ್ದೇಗೌಡ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:50 IST
Last Updated 25 ಆಗಸ್ಟ್ 2025, 5:50 IST
ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ, ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ₹65 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭಾನುವಾರ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಮಹೇಶ್, ತಾ.ಪಂ. ಮಾಜಿ ಸದಸ್ಯ ಎನ್‌.ಪಿ. ಸುರೇಶ್ ಭಾಗವಹಿಸಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ, ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ₹65 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭಾನುವಾರ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಮಹೇಶ್, ತಾ.ಪಂ. ಮಾಜಿ ಸದಸ್ಯ ಎನ್‌.ಪಿ. ಸುರೇಶ್ ಭಾಗವಹಿಸಿದ್ದರು   

ಶ್ರೀರಂಗಪಟ್ಟಣ: ‘ಕ್ಷೇತ್ರದಲ್ಲಿ ₹300 ಕೋಟಿಗೆ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಜನರಿಂದ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಸಿದರು.

ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ₹65 ಲಕ್ಷ ವೆಚ್ಚದ ಕಾಮಗಾರಿ, ಪಟ್ಟಣದ ಸಮೀ‍ಪದ ಪಶ್ಚಿಮವಾಹಿನಿಯಿಂದ ತಾಲ್ಲೂಕಿನ ಬೆಳಗೊಳ ಮಾರ್ಗವಾಗಿ ಮೈಸೂರು ತಾಲ್ಲೂಕು ಇಲವಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸುವ ₹5 ಕೋಟಿ ವೆಚ್ಚದ ಕಾಮಗಾರಿ ಹಾಗೂ ತಾಲ್ಲೂಕಿನ ಮಾರಸಿಂಗನಹಳ್ಳಿ– ಗಾಮನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿಯ ₹ 25 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ವಿತರಣಾ ನಾಲೆಗಳು, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಬಹುಗ್ರಾಮ ಮತ್ತು ಜಲಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಹಾಗೂ ಸೆಸ್ಕ್‌ ವತಿಯಿಂದ ತಾಲ್ಲೂಕಿನ 5 ಕಡೆ ಮಾದರಿ ಗ್ರಾಮ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸುವಂತೆ ಸೂಚಿಸಲಾಗಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಳಜಿಯಿಂದ ಕೆಲಸ ಮಾಡಬೇಕು’ ಎಂದು ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. 

ADVERTISEMENT

ನೇರಲಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಮನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಹೇಶ್, ತಾ.ಪಂ. ಮಾಜಿ ಸದಸ್ಯ ಎನ್‌.ಪಿ. ಸುರೇಶ್, ಅಪೆಕ್ಸ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಶಿವಯ್ಯ, ಎಇಇ ಮಂಜುನಾಥ್, ಮುಖಂಡ ಹೇಮಂತ್‌ಕುಮಾರ್‌; ಬೆಳಗೊಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ. ರವಿಕುಮಾರ್‌, ಮಾಜಿ ಅಧ್ಯಕ್ಷ ಬಿ.ವಿ. ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ, ತಾ.ಪಂ. ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ವಿಷಕಂಠೇಗೌಡ, ರವಿ, ಲೋಕೋಪಯೋಗಿ ಎಇಇ ಜಸ್ವಂತ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.