ADVERTISEMENT

ಶ್ರೀರಂಗಪಟ್ಟಣ: ‘ವಸಂತ ಕೊಳ ಉದ್ಯಾನ’ ತೀರಾ ಅಧ್ವಾನ!

ಶ್ರೀರಂಗನಾಥಸ್ವಾಮಿ ದೇವಾಲಯ ಸಮೀಪದ ಪಾರ್ಕ್‌ನಲ್ಲಿ ಕಸದ ರಾಶಿ, ಗಿಡಗಂಟಿ

ಗಣಂಗೂರು ನಂಜೇಗೌಡ
Published 4 ಅಕ್ಟೋಬರ್ 2021, 6:01 IST
Last Updated 4 ಅಕ್ಟೋಬರ್ 2021, 6:01 IST
ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳದ ಮಗ್ಗುಲಲ್ಲಿರುವ ಉದ್ಯಾನದಲ್ಲಿ ಪಾರ್ಥೇನಿಯಂ ಬೆಳೆದಿರುವುದು
ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳದ ಮಗ್ಗುಲಲ್ಲಿರುವ ಉದ್ಯಾನದಲ್ಲಿ ಪಾರ್ಥೇನಿಯಂ ಬೆಳೆದಿರುವುದು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳದ ಮಗ್ಗುಲಲ್ಲೇ ಇರುವ ಉದ್ಯಾನ ಅಧ್ವಾನಗಳ ಆಗರವಾಗಿದೆ.

ಶ್ರೀರಂಗನಾಥಸ್ವಾಮಿ ದೇವಾಲ ಯದ ಬಲ ಪಾರ್ಶ್ವದಲ್ಲಿರುವ ಈ ಉದ್ಯಾ ನದಲ್ಲಿ ಕಳೆ ಗಿಡಗಳು ಎದೆ ಎತ್ತರಕ್ಕೆ ಬೆಳೆದು ನಿಂತಿವೆ. ಪಾರ್ಥೇನಿಯಂ ಇನ್ನಿತರ ಗಿಡಗಳು ಸೊಂಪಾಗಿ ಬೆಳೆ ದಿದ್ದು, ಕಾಲಿಡಲು ಆಗದ ಸ್ಥಿತಿ ನಿರ್ಮಾ ಣವಾಗಿದೆ. ಮುಳ್ಳು ಗಿಡಗಳು ಕಾಲಿಗೆ ಚುಚ್ಚುತ್ತವೆ. ಉದ್ಯಾನದ ಎಡ ಬದಿಯ ಪ್ರವೇಶ ದ್ವಾರದಲ್ಲಿ ಕಸದ ರಾಶಿಯೇ ಬಿದ್ದಿದೆ. ಪಕ್ಕದ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸಲು ಹಾಕಿರುವ ಕೊಳವೆಯಿಂದ ಸದಾಕಾಲ ನೀರು ಜಿನುಗುತ್ತಿದೆ. ಜೌಗು ಪ್ರದೇಶವಾಗಿ ಮಾರ್ಪಟ್ಟಿದ್ದು, ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ.

ಉದ್ಯಾನದ ಒಳಗಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಜನನ ಮಂಟಪದ ಮುಂದೆ ತ್ಯಾಜ್ಯ ಚೆಲ್ಲಾಡುತ್ತಿದೆ. ಮಂಟದ ಮೇಲೆ ಆಲದ ಸಸಿ ಬೆಳೆಯುತ್ತಿದೆ. ಉದ್ಯಾನದ ಒಳಗಿರುವ ಕೆಲವು ಮರಗಳ ರೆಂಬೆಗಳು ಒಣಗಿದ್ದು, ಮುರಿದು ಬೀಳುತ್ತಿವೆ. ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡ ಪಾದಚಾರಿ ಮಾರ್ಗ ದಗುಂಟ ಮರದ ಬೇರು ಹಬ್ಬಿದ್ದು, ಸಿಮೆಂಟ್‌ ಬ್ಲಾಕ್‌ ಮೇಲೆದ್ದಿವೆ, ವಿಹಾರಕ್ಕೆ ಬರುವವರು ಎಡವಿ ಬೀಳುತ್ತಿದ್ದಾರೆ.

ADVERTISEMENT

ಉದ್ಯಾನವನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಳವಡಿಸಿರುವ ವಿದ್ಯುತ್‌ ವೈರ್‌ಗಳು ಕಿತ್ತು ಬಂದಿವೆ. ವಿದ್ಯುತ್‌ ನಿಯಂತ್ರಣ ಪೆಟ್ಟಿಗೆ ಕೂಡ ಮುರಿದು ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿದ್ದ ವಿದ್ಯುತ್‌ ದೀಪಗಳು ಕೆಟ್ಟಿದ್ದು, ನಿಷ್ಪ್ರಯೋಜಕವಾಗಿವೆ. ರಾತ್ರಿ ವೇಳೆ ಇದು ದುಷ್ಕರ್ಮಿಗಳ ಅಡ್ಡೆವಾಗಿ ಮಾರ್ಪಡುತ್ತದೆ. ಮದ್ಯದ ಬಾಟಲಿಗಳೂ ಬಿದ್ದು ಚೆಲ್ಲಾಡುತ್ತಿವೆ.

ಕಸದ ತೊಟ್ಟಿಯಾದ ವಸಂತ ಕೊಳ: ಉದ್ಯಾನದ ಮಧ್ಯೆ ಇರುವ ವಸಂತ ಕೊಳದ ಸುತ್ತಲೂ ಕಳೆ ಗಿಡಗಳು ಬೆಳೆದಿದ್ದು, ಕಸ ರಾಶಿ ಬಿದ್ದಿದೆ. ಒಡೆಯರ್‌ ದೊರೆಗಳ ಆಡಳಿತ ಕಾಲದಲ್ಲಿ ಕಂದು ಬಣ್ಣದ ಗ್ರಾನೈಟ್‌ ಶಿಲೆಯಿಂದ ನಿರ್ಮಿಸಿರುವ ಈ ಅಪರೂಪದ ಕೊಳ ಕಸದ ತೊಟ್ಟಿಯಾಗಿದೆ. ಹಗಲು ಹೊತ್ತಿನಲ್ಲಿ ಈ ಕೊಳದ ಕಲ್ಲಿನ ಮೇಲೆ ಬಟ್ಟೆ ಒಣ ಹಾಕಲಾಗುತ್ತದೆ. ಈ ಕೊಳದ ಪಕ್ಕದಲ್ಲಿ ಪುರಸಭೆ ನಿರ್ಮಿಸಿದ್ದ ಕೃತಕ ನೀರಿನ ಝರಿ ಬತ್ತಿ ಹೋಗಿದ್ದು, ಅದಕ್ಕೆ ಮರು ಜೀವ ನೀಡಿಲ್ಲ.

‘2010ರಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ಅಭಿವೃದ್ಧಿ ಮಾಡಲಾಗಿತ್ತು. ಇದರ ನಿರ್ವಹಣೆಗೆಂದು ಪುರಸಭೆ ಪ್ರತಿ ತಿಂಗಳು ₹ 5 ಸಾವಿರ ಲೆಕ್ಕ ತೋರಿಸುತ್ತಿದೆ. ಆದರೆ ನಿರ್ವಹಣೆ ಕೆಲಸ ಲವಲೇಶವೂ ನಡೆಯುತ್ತಿಲ್ಲ. ಕಾವಲುಗಾರರೂ ಇಲ್ಲ. ₹ 11 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ಸ್ಥಾಪಿಸಿರುವ ವ್ಯಾಯಾಮ ಘಟಕ ಇನ್ನೂ ಉದ್ಘಾಟನೆಯಾಗಿಲ್ಲ. ಅದರ ಪರಿಕರಗಳು ತುಕ್ಕು ಹಿಡಿಯುತ್ತಿವೆ. ದಸರಾ ವೇಳೆಗಾದರೂ ಉದ್ಯಾನದ ಸ್ಥಿತಿ ಸರಿಪಡಿಸಬೇಕು’ ಎಂದು ಪುರಸಭೆಯ ಸದಸ್ಯ ಎಂ. ನಂದೀಶ್‌ ಒತ್ತಾಯಿಸಿದರು.

‘ಉದ್ಯಾನದ ನಿರ್ವಹಣೆಗೆ ಟೆಂಡರ್‌ ಕರೆಯಲು ಉದ್ದೇಶಿಸಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಾನಸ ಧರ್ಮರಾಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.