ADVERTISEMENT

ದೇಗುಲ ಬಂದ್‌: ಹೊರಗಿನಿಂದಲೇ ಪ್ರಾರ್ಥಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 16:30 IST
Last Updated 13 ಜನವರಿ 2022, 16:30 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಬಂದ್‌ ಮಾಡಿದ್ದರಿಂದ ಭಕ್ತರು ಹೊರಗೆ ನಿಂತು ಕೈಮುಗಿದರು
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಬಂದ್‌ ಮಾಡಿದ್ದರಿಂದ ಭಕ್ತರು ಹೊರಗೆ ನಿಂತು ಕೈಮುಗಿದರು   

ಶ್ರೀರಂಗಪಟ್ಟಣ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಗುರುವಾರ ಬಂದ್‌ ಮಾಡಲಾಗಿತ್ತು.

ಮುಂಜಾನೆ ದೇವರಿಗೆ ಅಗ್ರ ಪೂಜೆ ಸಲ್ಲಿಸಿದ ಬಳಿಕ ದೇಗುಲದ ಮಹಾ ದ್ವಾರವನ್ನು ಮುಚ್ಚಲಾಯಿತು. ವೈಕುಂಠ ಏಕಾದಶಿಯ ನಿಮಿತ್ತ ದೇವಾಲಯಕ್ಕೆ ಹೆಚ್ಚಿನ ಭಕ್ತರು ಬರುವ ವಾಡಿಕೆ ಇದ್ದುದರಿಂದ ದೇಗುಲಕ್ಕೆ ಭಕ್ತರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿತ್ತು.

ಭಕ್ತರ ಪ್ರವೇಶ ನಿಷೇಧ ಸಂಬಂಧ ದೇವಾಲಯದ ಹೊರಗೆ ಫಲಕವನ್ನೂ ಹಾಕಲಾಗಿತ್ತು.

ADVERTISEMENT

ಶ್ರೀರಂಗನಾಥಸ್ವಾಮಿ ದೇವಾಲಯ ಬಂದ್‌ ಮಾಡುವ ವಿಷಯ ತಿಳಿಯದ ರಾಜ್ಯ, ಹೊರ ರಾಜ್ಯಗಳ ಭಕ್ತರು ಶ್ರೀರಂಗನಾಥನ ದರ್ಶನಕ್ಕೆ ಆಗಮಿಸಿದ್ದರು. ಹಾಗೆ ಬಂದವರು ಹೊರಗೇ ನಿಂತು ಕೈ ಮುಗಿದು ವಾಪಸಾದರು.

‘ವೈಕುಂಠ ಏಕಾದಶಿಯಂದು ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗನ ದರ್ಶನ ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ. ಆದರೆ ಪಟ್ಟಣದ ಆದಿರಂಗನ ದರ್ಶನಕ್ಕೆ ಅವಕಾಶ ಇಲ್ಲದೇ ಇರುವುದು ನಿರಾಸೆ ಮೂಡಿಸಿದೆ’ ಎಂದು ಬೆಂಗಳೂರಿನ ಕಿರಣ್‌, ವಸಂತಮ್ಮಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಕರಿಘಟ್ಟದ ಶ್ರೀನಿವಾಸ, ಗಂಜಾಂ ನಿಮಿಷಾಂಬಾ ದೇವಾಲಯದಲ್ಲಿ ಗುರುವಾರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಮಾತ್ರ ಬಂದ್‌ ಮಾಡಿರುವುದು ಸರಿಯಲ್ಲ. ಇದರಿಂದ ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಕೋವಿಡ್‌–19 ಮಾರ್ಗಸೂಚಿ ಅನ್ವಯ ಶ್ರೀರಂಗನಾಥನ ದರ್ಶನಕ್ಕೆ ಅವಕಾಶ ನೀಡಬೇಕಿತ್ತು’ ಎಂದು ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಪುರಸಭೆ ಸದಸ್ಯ ಎಂ. ಶ್ರೀನಿವಾಸ್‌ ಹೇಳಿದರು.

ಶಾಸಕ ಸಚಿವ ಎಚ್.ಡಿ.ರೇವಣ್ಣ ಮುಂಜಾನೆ, ಅಗ್ರ ಪೂಜೆ ವೇಳೆಗೆ ಶ್ರೀರಂಗನಾಥನ ದರ್ಶನ ಪಡೆದರು.

ಲಕ್ಷ ದೀಪೋತ್ಸವ ರದ್ದು: ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ, ಸಂಕ್ರಾಂತಿಯಂದು ಪ್ರತಿ ವರ್ಷ ನಡೆಯುತ್ತಿದ್ದ ಲಕ್ಷ ದೀಪೋತ್ಸವವನ್ನು ಈ ಬಾರಿ ರದ್ದುಪಡಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಲಕ್ಷ ದೀಪೋತ್ಸವ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಸಾಂಕೇತಿಕವಾಗಿ ನೂರೊಂದು ದೀಪಗಳನ್ನು ಮಾತ್ರ ಹಚ್ಚಲಾಗುತ್ತದೆ ಎಂದು ಲಕ್ಷ ದೀಪೋತ್ಸವ ಆಚರಣಾ ಸಮಿತಿಯ ಸದಸ್ಯ ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.