ADVERTISEMENT

‘ಸ್ಥಳನಾಮ’ಗಳ ಕೋಶ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ

ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಹೆಜ್ಜೆ

ಸಿದ್ದು ಆರ್.ಜಿ.ಹಳ್ಳಿ
Published 16 ಅಕ್ಟೋಬರ್ 2025, 0:30 IST
Last Updated 16 ಅಕ್ಟೋಬರ್ 2025, 0:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಪ್ರಾಕೃತಿಕ ವೈಶಿಷ್ಟ್ಯ ಬಿಂಬಿಸುವ ಮತ್ತು ಜನವಸತಿ ಪ್ರದೇಶವನ್ನು ಗುರುತಿಸುವ ಸುಮಾರು 1.10 ಲಕ್ಷ ‘ಸ್ಥಳನಾಮ’ಗಳು ರಾಜ್ಯದಲ್ಲಿದ್ದು, ಅವುಗಳನ್ನು ಸಂರಕ್ಷಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಸ್ಥಳನಾಮಗಳ ಕೋಶ’ ಹೊರತರಲು ಸಿದ್ಧತೆ ನಡೆಸಿದೆ. 

ರಾಜ್ಯದಲ್ಲಿ ಸುಮಾರು 30 ಸಾವಿರ ಗ್ರಾಮಗಳಿದ್ದು, ನಿರ್ದಿಷ್ಟ ಭೂಪ್ರದೇಶವನ್ನು ಗುರುತಿಸಲು ಸ್ಥಳನಾಮಗಳಿವೆ. ಈ ಎಲ್ಲ ಹೆಸರುಗಳ ಸಮಗ್ರ ಪಟ್ಟಿ, ಆ ಪದಗಳ ವ್ಯುತ್ಪತ್ತಿ, ಇತಿಹಾಸ ಮತ್ತು ಅರ್ಥ ವಿವರಣೆ ಜನರಿಗೆ ಸಿಗಲಿದೆ.

‘ಗ್ರಾಮಸೂಚಿ ಇದ್ದರೂ ಸ್ಥಳಗಳ ವಿಶೇಷ ಸಾರುವ ಸಮಗ್ರ ಪಟ್ಟಿ ಇಲ್ಲ. ಸ್ಥಳನಾಮಗಳು ನಾಡಿನ ಬಗ್ಗೆ ಅನೇಕ ಒಳನೋಟಗಳನ್ನು ನೀಡುತ್ತವೆ. ಅವುಗಳನ್ನು ಸಂರಕ್ಷಿಸಿದರೆ ಕನ್ನಡ ಭಾಷೆ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ’ ಎಂಬುದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಅಭಿಮತ.  

ADVERTISEMENT

ಚಾರಿತ್ರಿಕ ಮಹತ್ವ:

ಎಡೆ, ತಾಣ, ಪುರ, ಹಳ್ಳಿ, ವಾಡಿ, ಕೊಪ್ಪಲು, ಬಾಡ, ಗುತ್ತು, ಗೂಡು, ಕುಂಟೆ, ಕೊತ್ತ, ಕೋಡು, ತಟ, ಬೂಡು, ಕೊಪ್ಪಲು ಮೊದಲಾದ ಪದಗಳುಳ್ಳ ಹೆಸರುಗಳು ಮಾನವ ವಸತಿಯ ವಿವಿಧ ಹಂತಗಳನ್ನು ಸಂಕೇತಿಸುತ್ತವೆ. ಸ್ಥಳನಾಮಗಳಲ್ಲಿ ಕಲ್ಲುಗಳಿಗೆ ವಿಶೇಷ ಮಹತ್ವವಿದ್ದು, ಜೇನುಕಲ್ಲು ಗುಡ್ಡ, ಆನೆಕಲ್ಲು, ಬೆಣಕಲ್‌, ಹಾನಗಲ್‌, ಕಾರ್ಕಳ, ಕರೇಕಲ್‌, ಕಲ್ಲಹಳ್ಳಿ ಹೆಸರುಗಳಿಗೆ ಚಾರಿತ್ರಿಕ ಮಹತ್ವವಿದೆ.

ಕನ್ನಡದಲ್ಲಿ ಪ್ರಾಣಿ ಮತ್ತು ಸಸ್ಯಸೂಚಕ ಸ್ಥಳನಾಮಗಳು ಹೇರಳವಾಗಿವೆ. ಆನೆಕಲ್ಲು, ಎಲಿಮಲೆ, ಹುಲಿಕಲ್‌, ಗಿಣಿಗೇರಾ, ನವಿಲೂರು, ನೊಣವಿನ ಕೆರೆ, ಮಂಗನಹಳ್ಳಿ ಮುಖ್ಯವಾಗಿವೆ. ಬೆಟ್ಟ, ಗುಡ್ಡ, ಕಾಡು, ಕಣಿವೆ, ನದಿ, ಕೆರೆಯನ್ನು ಸೂಚಿಸುವ ಸ್ಥಳನಾಮಗಳು ಆ ಪ್ರದೇಶದ ಪ್ರಕೃತಿಯ ಮಹತ್ವಕ್ಕೆ ಕನ್ನಡಿ ಹಿಡಿದಿವೆ. 

ಪ್ರಾದೇಶಿಕ ಪದಕೋಶ:

‘ಬೀದರ್‌ನಿಂದ ಚಾಮರಾಜನಗರದವರೆಗೆ, ಕರಾವಳಿಯಿಂದ ಕೋಲಾರದವರೆಗೆ ವಿಭಿನ್ನವಾದ ಪ್ರಾದೇಶಿಕ ಭಾಷೆಗಳ ಸೊಗಡಿದೆ.  ಮುದ್ರಣ ಮಾಧ್ಯಮ ಮತ್ತು ಪುಸ್ತಕಗಳಲ್ಲಿ ಬಹುತೇಕ ಏಕರೂಪದ ಕನ್ನಡ ಬಳಕೆಯಾಗುತ್ತಿದೆ. ಸ್ಥಳೀಯ ಭಾಷೆಗಳ ಸೊಬಗನ್ನು ಸಂರಕ್ಷಿಸಲು ಪ್ರಾಧಿಕಾರ ‘ಪ್ರಾದೇಶಿಕ ಪದಕೋಶ’ಗಳನ್ನು ಹೊರತರಲು ನಿರ್ಧರಿಸಿದೆ’ ಎನ್ನುತ್ತಾರೆ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌. 

ಪುರುಷೋತ್ತಮ ಬಿಳಿಮಲೆ

ಬಹುತೇಕ ಅಂಗಡಿಗಳ ನಾಮಫಲಕದಲ್ಲಿ ಊರಿನ ಹೆಸರು ಇರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಪ್ರವಾಸಿಗರಿಗೆ ಸ್ಥಳನಾಮವೇ ತಿಳಿಯುವುದಿಲ್ಲ. ಊರಿನ ಹೆಸರನ್ನು ಕಡ್ಡಾಯವಾಗಿ ಹಾಕಬೇಕು
ಪುರುಷೋತ್ತಮ ಬಿಳಿಮಲೆ ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

‘ಶೇ 80 ಸ್ಥಳನಾಮಗಳ ಸಂಗ್ರಹ’

‘ಸ್ಥಳನಾಮಗಳಿಗೆ ಸಂಬಂಧಿಸಿ ಶೇ 80ರಷ್ಟು ಮಾಹಿತಿ ಕಲೆ ಹಾಕಲಾಗಿದೆ. ಸ್ಥಳನಾಮಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಸಂದೇಶ ಒಳಗೊಂಡ ವಿಡಿಯೊ ಊರಿನ ಹೆಸರು ಉಳಿಸಲು ‘ಜಾಗೃತಿ ಜಾಥಾ’ ಮತ್ತು ‘ಸ್ಥಳನಾಮಗಳ ಕೋಶ’ವನ್ನು ಹೊರತರಲು ಸಿದ್ಧತೆ ನಡೆಸಿದ್ದೇವೆ’ ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.