
ಮಂಡ್ಯ: ‘ವೈಚಾರಿಕತೆ ಅಪ್ಪಿಕೊಂಡಿದ್ದ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರ ಸಾಹಿತ್ಯವು ಇಂದಿಗೂ ಪ್ರಸ್ತುತವಾಗಿದ್ದು, ಯುವ ಸಾಹಿತಿಗಳಿಗೆ ಪ್ರೇರಣೆಯಾಗಿದೆ’ ಎಂದು ಸಾಹಿತಿ ಬಿ.ಚಂದ್ರೇಗೌಡ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ಶನಿವಾರ ನಡೆದ ಎಂಟನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಎಚ್ಚೆಲ್ಕೆ ಅವರ ವಿಚಾರಧಾರೆಗಳು ಕುವೆಂಪು ಅವರ ಆಶಯದಂತೆ ಕಂಡಿವೆ. ಅವರ ಹೆಸರಿನಲ್ಲಿ ಪ್ರಶಸ್ತಿ ಕಾರ್ಯಕ್ರಮ ನಡೆಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅತ್ಯುತ್ತಮವಾಗಿದೆ. ಹಾಸ್ಯ ಪ್ರಜ್ಞೆ, ನಿಷ್ಠುರತೆ ಹಾಗೂ ಸಮಾಜ ತಿದ್ದುವ ಕೆಲಸವನ್ನು ಕೇಶವಮೂರ್ತಿ ಮಾಡಿದ್ದಾರೆ, ಪತ್ರಿಕೆಗಳು ಅಸ್ತಿತ್ವ ಕಳೆದುಕೊಳ್ಳುವ ಕಡೆ ಮುಖ ಮಾಡಿವೆ. ಏಕೆಂದರೆ ವ್ಯಾಪಾರೀಕರಣ ಆಗಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.
ಉಪನ್ಯಾಸಕಿ ಅನಿತಾ ಮಂಗಲ ಮಾತನಾಡಿ, ‘ಮಾನವೀಯತೆಯ ಬೇರುಗಳು ಸಡಿಲಗೊಳ್ಳುತ್ತಿರುವ ಹೊತ್ತಿನಲ್ಲಿ, ಮನುಷ್ಯ– ಮನುಷ್ಯರ ನಡುವೆ ಗೋಡೆ ಎದ್ದಿರುವ ಸಂದರ್ಭದಲ್ಲಿ ಪ್ರೊ.ಎಚ್ಚೆಲ್ಕೆ ಅವರ ವೈಚಾರಿಕತೆಯ ಮಾತುಗಳನ್ನು ನೆನಪಿಸಿಕೊಳ್ಳಬೇಕಿದೆ. ಏಕೆಂದರೆ ಮಾನವೀಯತೆಯ ಸಂಬಂಧ ಗೋಡೆ ಭದ್ರಗೊಳ್ಳಲು ಇಂತಹವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗುವುದು ಮುಖ್ಯವಾಗಬೇಕು’ ಎಂದು ಸಲಹೆ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ರಂಗಾಯಣ ಕಲಾವಿದೆ ಬಿ.ಎನ್. ಶಶಿಕಲಾ ಅವರಿಗೆ ಶ್ರೀರಂಗಪಟ್ಟಣದ ಚಿಂತಕ ಬಿ.ಸುಜಯ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕೆ.ಬೋರಯ್ಯ, ಕೆ.ರಾಜೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.