ADVERTISEMENT

ಮಂಡ್ಯ | ಮಣ್ಣಿನ ಫಲವತ್ತತೆ ಕಾಪಾಡಿ; ಸುತ್ತೂರು ಶ್ರೀ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:43 IST
Last Updated 8 ಡಿಸೆಂಬರ್ 2025, 5:43 IST
<div class="paragraphs"><p>ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂನಲ್ಲಿ ಭಾನುವಾರ ನಡೆದ ‘ಕೃಷಿಮೇಳ’ದ ಸಮಾರೋಪ ಸಮಾರಂಭದಲ್ಲಿ ರಾಸುಗಳ ವಿಭಾಗದಲ್ಲಿ ‘ಬಂಡೂರು ಕುರಿ’ ಸಾಕಿದ ರೈತನಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. </p></div>

ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂನಲ್ಲಿ ಭಾನುವಾರ ನಡೆದ ‘ಕೃಷಿಮೇಳ’ದ ಸಮಾರೋಪ ಸಮಾರಂಭದಲ್ಲಿ ರಾಸುಗಳ ವಿಭಾಗದಲ್ಲಿ ‘ಬಂಡೂರು ಕುರಿ’ ಸಾಕಿದ ರೈತನಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

   

ಮಂಡ್ಯ: ‘ಕೃಷಿಭೂಮಿಯ ಫಲವತ್ತತೆಯ ಶ್ರೇಷ್ಠತೆ ಕಾಪಾಡುವ ಅಗತ್ಯವಿದೆ. ಹೀಗಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ  ಮಣ್ಣಿನ ಫಲವತ್ತತೆ ರಕ್ಷಿಸಬಹುದು. ಅತಿ ಹೆಚ್ಚು ರಾಸಾಯನಿಕ ಬಳಕೆಯಿಂದ ಆಹಾರ ವಿಷಯಮಯವಾಗುತ್ತದೆ. ಇದರಿಂದ ಅನೇಕ ರೋಗಗಳಿಗೆ ನಾವು ತುತ್ತಾಗಬೇಕಾಗುತ್ತದೆ. ಹೀಗಾಗಿ ರೈತರು ಸಾಯಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. 

ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಜಲಾನಯನ ಅಭಿವೃದ್ಧಿ ಇಲಾಖೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಬಾರ್ಡ್ ಸಂಯುಕ್ತಾಶ್ರಯದಲ್ಲಿ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಮಂಡ್ಯದ ವಿ.ಸಿ.ಫಾರಂನಲ್ಲಿ ಭಾನುವಾರ ನಡೆದ ಕೃಷಿ ಮೇಳದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಾನ್ನಿಧ್ಯವಹಿಸಿ ಮಾತನಾಡಿದರು. 

ADVERTISEMENT

‘ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಲಾಭ ಕಂಡುಕೊಳ್ಳಬಹುದು. ಐಟಿ ಬಿಟಿಯಲ್ಲಿದ್ದ ಕೆಲವರು ಉದ್ಯೋಗ ಬಿಟ್ಟು ಕೃಷಿ ಕಾಯಕದಲ್ಲಿ ತೊಡಗಿಕೊಂಡು ಪ್ರಗತಿಪರ ರೈತರಾಗಿ ಬೆಳೆದಿರುವ ಉದಾಹರಣೆಗಳಿವೆ’ ಎಂದರು. 

ಮಂಡ್ಯ ಜಿಲ್ಲೆಯು ಹಸಿ ಭತ್ತ ಮತ್ತು ಹಸಿ ಬೆಲ್ಲಕ್ಕೆ ಪ್ರಸಿದ್ಧಿ ಪಡೆದಿದೆ. ಬೆಳೆಗೆ ಅಗತ್ಯವಿದ್ದಷ್ಟು ನೀರನ್ನು ಮಾತ್ರ ಬಳಸಿ. ಅತಿ ಹೆಚ್ಚು ನೀರನ್ನು ಸದಾ ಹರಿಸಿದರೆ ಇಳುವರಿ ಕುಂಠಿತವಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ಕೃಷಿ ವಿಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆದು, ಉತ್ತಮ ಬೆಳೆಗಳನ್ನು ಬೆಳೆಯಿರಿ ಎಂದರು. 

ಸಿರಿಧಾನ್ಯ ಬಳಸಿ: ಜಿ.ಪಂ. ಸಿಇಒ ಕೆ.ಆರ್‌.ನಂದಿನಿ ಅವರು ಕೃಷಿಮೇಳದಲ್ಲಿ 90ಕ್ಕೂ ಹೆಚ್ಚು ಗ್ರಾಮ ಮಟ್ಟದ ಮಹಿಳಾ ಒಕ್ಕೂಟಗಳ ಮೂಲಕ ಮಳಿಗೆಗಳನ್ನು ಸ್ಥಾಪಿಸಿ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಸಿರಿಧಾನ್ಯಗಳ ಮಹತ್ವವನ್ನು ಸಾರುವ ತಿನಿಸುಗಳು ರುಚಿಕರವಾಗಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿರಿಧಾನ್ಯವನ್ನು ಹೆಚ್ಚು ಬಳಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. 

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನೀಡಬೇಕು. ಸರ್ಕಾರ ನೀಡುವ ಸಾಲ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಮಹಿಳಾ ಸಬಲೀಕರಣ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕಿ ಆರ್. ನೇಹಲ್ ಮಾತನಾಡಿ, ‘50ಕ್ಕೂ ಹೆಚ್ಚು ಮಹಿಳೆಯರು ಮಳಿಗೆಯನ್ನು ತೆರೆದಿದ್ದಾರೆ. ನಮ್ಮ ರೈತ ಮಹಿಳೆಯರನ್ನು ಸುಸ್ಥಿರರನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಯ ಮೂಲಕ ಹಲವು ಸೌಲಭ್ಯವನ್ನು ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಕುಕ್ಕುಟ ಸಂಜೀವಿನಿ, ಮತ್ಸ್ಯ ಸಂಜೀವಿನಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಗಣ್ಯರು ಕೃಷಿ ಕುರಿತು ಮಾಹಿತಿಯುಳ್ಳ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಸಾಧಕರಿಗೆ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಂ. ಹರಿಣಿ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಕನ್ನಡ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್. ಪಾಟೀಲ. ಸಂಶೋಧನಾ ನಿರ್ದೇಶಕ ಜಿ.ಎಂ. ದೇವಗಿರಿ ಉಪಸ್ಥಿತರಿದ್ದರು.

ಕೃಷಿಮೇಳದಲ್ಲಿ ಭತ್ತದ ತಳಿಗಳನ್ನು ವೀಕ್ಷಿಸಿದ ಜನ
ಕೃಷಿಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ರೈತರು ವೀಕ್ಷಿಸಿದರು 
‘ಕೃಷಿಮೇಳ’ದ ಕೊನೆಯ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು

ರೈತರ ತಲಾದಾಯ ಹೆಚ್ಚಳವಾಗಲಿ: ನಿಶ್ಚಲಾನಂದನಾಥಶ್ರೀ  ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ವಿವಿ ವಿಶೇಷಾಧಿಕಾರಿ ಹರಿಣಿಕುಮಾರ್‌ ಅವರಿಗೆ ವಿವಿಯನ್ನು ಉತ್ತಮವಾಗಿ ಬೆಳೆಸುವ ಹಂಬಲ ಇಟ್ಟುಕೊಂಡಿದ್ದಾರೆ. ಮಂಡ್ಯ ಕೃಷಿ ವಿವಿ ಉನ್ನತ ಮಟ್ಟಕ್ಕೆ ಏರಲಿ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಆಶಿಸಿದರು.  ರೈತರ ತಲಾದಾಯ ಹೆಚ್ಚುವಂತೆ ಕೃಷಿ ಸಂಶೋಧನೆಗಳು ನಡೆಯಬೇಕು. ಸಂಶೋಧನೆಗಳ ಪ್ರಯೋಜನ ರೈತರಿಗೆ ಸಿಗಬೇಕು. ಮಣ್ಣು ಮತ್ತು ನೀರು ರೈತರ ಅಭಿಭಾಜ್ಯ ಅಂಗಗಳು. ಇವುಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ರೈತರು ಮನಗಾಣಬೇಕು ಎಂದು ಹೇಳಿದರು.  ಬರಪೀಡಿತ ಪ್ರದೇಶವಾದ ಕೋಲಾರದಿಂದ ಟೊಮೆಟೊ ಬೆಳೆಯುವ ರೈತರು ದೊಡ್ಡ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇದೇ ರೀತಿ ಎಲ್ಲ ರೈತರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕಿದೆ ಎಂದರು. 

‘ಸುಸ್ಥಿರ ಕೃಷಿಗೆ ರೈತರು ಮುಂದಾಗಲಿ’ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಪಿ.ಎಲ್. ಪಾಟೀಲ ಮಾತನಾಡಿ ‘ರೈತ ಬಾಂಧವರು ಸುಸ್ಥಿರ ಕೃಷಿಗೆ ಮುಂದಾಗಬೇಕು. ನಿಸರ್ಗದತ್ತವಾಗಿ ದೊರೆಯುವ ಮಣ್ಣು ಮತ್ತು ನೀರಿನ ಸಂಸ್ಕರಣೇ ಮಾಡುವುದು ಮುಖ್ಯ. ಮಂಡ್ಯ ಜಿಲ್ಲೆ ಶೇ 70ಕ್ಕೂ ಹೆಚ್ಚು ಭೂಮಿ ಹಸಿರುಮಯವಾಗಿದೆ. ಇದಕ್ಕೆ ಕಾವೇರಿ ಮಾತೆಗೆ ನೀವು ಚಿರಋಣಿಯಾಗಬೇಕು ಎಂದರು.  ಭೂಮಿಗೆ ಹರಿದು ಬರುವ ನೀರಿನ ಸಂಸ್ಕರಣೇ ಮಾಡಿ. ಮಿತವಾಗಿ ಬಳಕೆ ಮಾಡಿ ಭೂಮಿಯ ಸವಕಳಿಯನ್ನು ತಪ್ಪಿಸಿ. ಶ್ರೀಪದ್ಧತಿ  ಮೂಲಕ ಉತ್ತಮ ಭತ್ತದ ಇಳುವರಿಯನ್ನು ಪಡೆಯಬಹುದು. ಕಬ್ಬಿನ ಬೆಳೆಗೆ ಸಾಲು ಸಾಲು ಬಿಟ್ಟು ನೀರು ಹಾಯಿಸಿ. ಒಂದೇ ತರವಾದ ಬೆಳೆ ಬೆಳೆಯುವ ಬದಲು ಏಕದಳ ದ್ವಿದಳ ಬೆಳೆ ಬೆಳೆಯುವುದು ಸೂಕ್ತ. ಇದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ಪೂರೈಕೆ ಮಾಡಬಹುದು. ತೋಟಗಾರಿಕೆ ಬೆಳೆಯ ಜೊತೆ ಕುರಿ ಕೋಳಿ ಸಾಕಾಣಿಕೆ ಜೊತೆಗೆ ಪಶುಪಾಲನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

‘ಕೃಷಿ ಮೇಳದಲ್ಲಿ 12 ಲಕ್ಷ ಮಂದಿ ಭಾಗಿ’ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಮೊದಲ ಬಾರಿಗೆ ಆಯೋಜಿಸಿದ ಕೃಷಿ ಮೇಳಕ್ಕೆ 3 ದಿನಗಳಲ್ಲಿ ಸುಮಾರು 12 ಲಕ್ಷ ಮಂದಿ ಭಾಗಿಯಾಗಿದ್ದು ಮೇಳ ಅತ್ಯಂತ ಯಶಸ್ವಿಯಾಗಿದೆ ಎಂದು ಕೃಷಿ ವಿವಿ ವಿಶೇಷಾಧಿಕಾರಿ ಕೆ.ಎಂ.ಹರಿಣಿಕುಮಾರ್‌ ತಿಳಿಸಿದರು.  ಸೋಷಿಯಲ್‌ ಮೀಡಿಯಾ ಮತ್ತು ಪತ್ರಿಕೆಗಳ ವರದಿ ಹಾಗೂ ಇತರೆ ಜಾಹೀರಾತುಗಳ ಮೂಲಕ ಸುಮಾರು 62 ಲಕ್ಷ ಮಂದಿಗೆ ಕೃಷಿ ಮೇಳದ ಮಾಹಿತಿಯನ್ನು ತಲುಪಿಸಿದ್ದೆವು. ಈ ಬಾರಿ ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುವ ಮಂಡ್ಯ ಮೈಸೂರು ಚಾಮರಾಜನಗರ ಹಾಸನ ಮತ್ತು ಕೊಡಗು ಈ ಐದು ಜಿಲ್ಲೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ ಕಾರಣ ಮೇಳಕ್ಕೆ ಮೆರುಗು ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು.  ಬೆಂಗಳೂರು ವಿವಿ ವ್ಯಾಪ್ತಿಯಲ್ಲಿದ್ದ ವಿ.ಸಿ.ಫಾರಂ ವತಿಯಿಂದ 2 ದಿನಗಳ ಕೃಷಿ ಮೇಳ ಆಯೋಜಿಸಿದ ಸಂದರ್ಭದಲ್ಲಿ ಸುಮಾರು 2 ಲಕ್ಷ ಮಂದಿ ಭಾಗವಹಿಸುತ್ತಿದ್ದರು. ಈ ಬಾರಿ 3 ದಿನ ಮೇಳ ನಡೆದಿದ್ದು ಸುಮಾರು 350 ಮಳಿಗೆಗಳನ್ನು ಹಾಕಲಾಗಿತ್ತು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.