ADVERTISEMENT

ಸಿಇಒ ವಿರುದ್ಧ ‘ಗೋಬ್ಯಾಕ್‌’ ಚಳವಳಿ

ಕೂಲಿಕಾರರಿಗೆ ಕೆಲಸ ನೀಡಲಿ, ಬಾಕಿ ವೇತನ ಬಿಡುಗಡೆಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:23 IST
Last Updated 9 ಜುಲೈ 2025, 5:23 IST
ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ ಅವರು ಜಿಲ್ಲೆಯ ಹೋರಾಟಗಾರರ ಧ್ವನಿ ಅಡಗಿಸಲು ಹೊರಟಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಕೂಲಿ ಕಾರ್ಮಿಕರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು
ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ ಅವರು ಜಿಲ್ಲೆಯ ಹೋರಾಟಗಾರರ ಧ್ವನಿ ಅಡಗಿಸಲು ಹೊರಟಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಕೂಲಿ ಕಾರ್ಮಿಕರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು   

ಮಂಡ್ಯ: ‘ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಅಧೀನ ನೌಕರರ ಮೂಲಕ ಪ್ರತಿಭಟನೆ ನಡೆಸಿ, ಜಿಲ್ಲೆಯ ಹೋರಾಟಗಾರರ ಧ್ವನಿ ಅಡಗಿಸಲು ಹೊರಟಿದ್ದು, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಕೂಲಿ ಕಾರ್ಮಿಕರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಸಿಇಒ ಅವರನ್ನು ವರ್ಗಾವಣೆ ಮಾಡುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳವಳ್ಳಿ, ಮದ್ದೂರು, ಹಲಗೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯಿತು. 

ಸ್ಥಳೀಯರಾಗಿರುವ ಕೆ.ಆರ್‌.ನಂದಿನಿ ಅವರು ಅಧಿಕಾರದಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ಅಧಿಕಾರ ಮತ್ತು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿರುವ ಸಿಸಿಒ ಮತ್ತು ಡಿಎಸ್‌–2 ಲಕ್ಷ್ಮೀ ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಕೂಡಲೇ ಕೂಲಿಕಾರರಿಗೆ ಕೆಲಸ ನೀಡಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು. ಕಡಿಮೆ ಕೂಲಿ ಹಾಕಿರುವುದನ್ನು ಸರಿಪಡಿಸಿ ಸರಿಯಾದ ಕೂಲಿ ಪಾವತಿಸಬೇಕು. ಕೆಲಸಕ್ಕೆ ಅನಧಿಕೃತ ಗೈರುಹಾಜರಿಯಾಗಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳು ಮತ್ತು ನೌಕರರ ಮೇಲೆಯೂ ಶಿಸ್ತುಕ್ರಮ ಆಗಬೇಕು. ಅನುಮೋದನೆ ನೀಡದ 550 ನೌಕರರಿಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಎಂ.ಪುಟ್ಟಮಾದು, ಟಿ.ಎಲ್‌.ಕೃಷ್ಣೇಗೌಡ, ಭರತ್‌ರಾಜ್‌, ದೇವಿ, ಸಿ.ಕುಮಾರಿ, ಸಿದ್ದರಾಜು ಎಂ, ನ.ಲಿ.ಕೃಷ್ಣ, ಶಿವರಾಜ್‌ ಮರಳಿಗ, ಮಾದೇಶ್‌, ಚನ್ನಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.