ಮಂಡ್ಯ: ದಲಿತ ವಿರೋಧಿ ಹೇಳಿಕೆ ನೀಡಿರುವ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂವಿಧಾನ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಜಿ.ಟಿ.ದೇವೇಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅವಹೇಳನಕಾರಿ ಹೇಳಿಕೆ ನೀಡಿರುವ ಇವರ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಅಧಿವೇಶನದಲ್ಲಿ ಸಹಕಾರ ಮಸೂದೆಯನ್ನು ಸರ್ಕಾರವು ಮಂಡಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರು ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವ ಮೂಲಕ ಸಹಕಾರ ಕ್ಷೇತ್ರವನ್ನು ಮುಳುಗಿಸಿಬಿಡಿ ಸರ್ವನಾಶ ಮಾಡಿಬಿಡಿ ಎಂದು ಮಾತನಾಡಿದ್ದಾರೆ. ಇದರಿಂದ ರಾಜ್ಯದ ಬಹು ಸಂಖ್ಯಾತರಾದ ದಲಿತ ವರ್ಗಕ್ಕೆ ಅಪಾರ ಮಾನಹಾನಿಯಾಗಿದೆ ಎಂದು ಆರೋಪಿಸಿದರು.
ದಲಿತರಿಗೆ ಪ್ರಾತಿನಿಧ್ಯ ನೀಡಿದರೆ ಸಹಕಾರ ಕ್ಷೇತ್ರ ಸರ್ವನಾಶವಾಗುವುದೇ? ದಲಿತರ ಬಗ್ಗೆ ಈ ರೀತಿಯ ಕೀಳು ಮನೋಭಾವನೆ ಹೊಂದಿರುವ ಮೂಲಕ ಸಮುದಾಯವನ್ನು ಅವಮಾನ ಮಾಡಿರುವ ಜಿ.ಟಿ.ದೇವೇಗೌಡರ ವಿರುದ್ಧ ಅಟ್ರಾಸಿಟಿ ಮೊಕದ್ದಮೆ ಹಾಕಬೇಕು ಎಂದು ಆಗ್ರಹಿಸಿದರು.
ಇವರು ಕ್ಷಮೆ ಕೇಳಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜೆಡಿಎಸ್ ಪಕ್ಷವು ಜಿ.ಟಿ.ದೇವೇಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ನಮ್ಮ ಒತ್ತಾಯವನ್ನು ನಿರ್ಲಕ್ಷಿಸಿದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು, ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಚ್.ಜಿ.ಗಂಗರಾಜು, ಕುಮಾರ, ಕೃಷ್ಣ, ಸೋಮಶೇಖರ್, ಪ್ರಮೋದ್, ಶಿವರಾಜ್‌ಕುಮಾರ್, ನಿತ್ಯಾನಂದ, ವೀರಭದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.