ಮದ್ಯದ ಬೆಲೆ ಏರಿಕೆ ವಿರೋಧಿಸಿ ಶ್ರೀರಂಗಪಟ್ಟಣದ ಅಬಕಾರಿ ನಿರೀಕ್ಷಕರ ಕಚೇರಿ ಎದುರು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣ: ಮದ್ಯದ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಬಕಾರಿ ನಿರೀಕ್ಷಕರ ಕಚೇರಿ ಎದುರು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟಿಸಿದರು. ಅಬಕಾರಿ ಸಚಿವರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಳನೀರು ಕುಡಿದು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದರು.
ಗಾಂಧಿ ತತ್ವ ಹೇಳುವ ಸರ್ಕಾರ ಮದ್ಯ ಮಾರಾಟವನ್ನು ನಿಷೇಧ ಮಾಡುವ ಬದಲು ಪ್ರತಿ ಹಳ್ಳಿಗಳಲ್ಲಿ ಎಂಎಸ್‌ಐಎಲ್ ಮೂಲಕ ಅಂಗಡಿ ತೆರೆದು ಮಾರಾಟ ಮಾಡುತ್ತಿದೆ. ಜತೆಗೆ ಮದ್ಯದ ಬೆಲೆಯನ್ನು ಬೇಕಾಬಿಟ್ಟಿ ಹೆಚ್ಚಿಸಿ ಜನರನ್ನು ಶೋಷಣೆ ಮಾಡುತ್ತಿದೆ. ಶ್ರಮಿಕರು ತಾವು ದುಡಿದ ಹಣವನ್ನು ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜನರ ಕಲ್ಯಾಣದ ಬಗ್ಗೆ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು ಆಗ್ರಹಿಸಿದರು.
‘ಮದ್ಯದ ಖಾಲಿ ಬಾಟಲಿಗಳು ಬೀದಿಗಳಲ್ಲಿ ಚೆಲ್ಲಾಡುತ್ತಿವೆ. ಕೆಲವರು ಗಾಜಿನ ಬಾಟಲಿಗಳನ್ನು ನದಿಗೆ, ಹಳ್ಳ, ಕೆರೆ, ಕುಂಟೆಗಳಿಗೆ ಎಸೆಯುತ್ತಿದ್ದಾರೆ. ಗಾಜಿನ ಬಾಟಲಿಗಳು, ಪೌಚ್‌ಗಳಿಂದ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕು’ ಎಂದು ಅವರು ಒತ್ತಾಯಿಸಿದರು.
ಅಬಕಾರಿ ನಿರೀಕ್ಷಕ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಕೆ.ಎಚ್. ಜಗದೀಶಗೌಡ, ಛಾಯಾದೇವಿ, ಕೆಂಪೇಗೌಡ, ಸರಸ್ವತಮ್ಮ, ಕಮಲಮ್ಮ, ಸರಸ್ವತಮ್ಮ, ಜಯರಾಂ, ಸಾವಿತ್ರಮ್ಮ, ಲಕ್ಷ್ಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.