ADVERTISEMENT

ನೌಕರನ ವಜಾ ಖಂಡಿಸಿ ಪ್ರತಿಭಟನೆ

ಮದ್ದೂರಿನ ಪುರಸಭೆ ಮುಖ್ಯಾಧಿಕಾರಿ, ಗುತ್ತಿಗೆ ಕಂಪನಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 1:30 IST
Last Updated 19 ಫೆಬ್ರುವರಿ 2021, 1:30 IST
ಮದ್ದೂರು ಪುರಸಭೆಯಲ್ಲಿ ವಾಹನ ಚಾಲಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಕೆಲಸದಿಂದ ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಯಿತು
ಮದ್ದೂರು ಪುರಸಭೆಯಲ್ಲಿ ವಾಹನ ಚಾಲಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಕೆಲಸದಿಂದ ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಯಿತು   

ಮದ್ದೂರು: ಮದ್ದೂರು ಪುರಸಭೆಯಲ್ಲಿ ವಾಹನ ಚಾಲಕನಾಗಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರನನ್ನು ಕೆಲಸದಿಂದ ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್, ಹೊರಗುತ್ತಿಗೆ ಪಡೆದಿರುವ ಕಂಪನಿ ವಿರುದ್ಧ ಕರ್ನಾಟಕ ರಾಜ್ಯ ಪಾಲಿಕೆ, ನಗರ ಸಭೆ, ಪುರಸಭೆ ಪಟ್ಟಣದ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ವತಿಯಿಂದ ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಮುಖ್ಯಾಧಿಕಾರಿ ಹೊರಗುತ್ತಿಗೆ ನೌಕರರ ಹಿತಕಾಯದೆ ನೌಕರರ ಉದ್ಯೋಗ ಭದ್ರತೆಗೆ ಬೆದರಿಕೆ ಒಡ್ಡಿರುವ ಮುಖ್ಯಾಧಿಕಾರಿ ವರ್ತನೆ ಅಮಾನವೀಯವಾದುದು. ನೌಕರ ವಿರೋಧಿ ಧೋರಣೆ ಅನುಸರಿಸಲಾಗಿದೆ. ಕೈ ಬಿಟ್ಟಿರುವ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪುರಸಭೆಗಳಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ನಿಲ್ಲಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿದರು.

ಚಾಲಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ್ ಅವರಲ್ಲಿ ಲೋಪ ಇಲ್ಲದೆ ಇದ್ದರೂ ಗುತ್ತಿಗೆ ಏಜೆನ್ಸಿ ಮೂಲಕ ಕೆಲಸದಿಂದ ಕೈ ಬಿಡಲಾಗಿದೆ. ಈ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜಟ್ಟಿಂಗ್ ಮಿಷನ್ ರಿಪೇರಿ ಸಂಬಂಧ ₹ 2.50 ಲಕ್ಷ ಅವ್ಯವಹಾರ ನಡೆದಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಹೊರಗುತ್ತಿಗೆ ನೌಕರರ ಪರವಾಗಿ ಅವರ ಹಕ್ಕುಗಳ ಬಗ್ಗೆ ಸಂಘಟಿಸುತ್ತಿರುವುದು ಮುಖ್ಯಾಧಿಕಾರಿಯ ಕೆಂಗೆಣ್ಣಿಗೆ ಗುರಿಯಾಗಿದೆ. ಈ ಕಾರಣಕ್ಕೆ ಕೆಲಸದಿಂದ ಕೈ ಬಿಟ್ಟಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹೊರ ಗುತ್ತಿಗೆ ನೌಕರರಿಗೆ ಸಮವಸ್ತ್ರ, ವೇತನ ಚೇಟಿ, ಸೇವಾ ಭದ್ರತೆ ಒದಗಿಸಬೇಕು. ಅಗತ್ಯ ಸೇವೆ ನಿರ್ವಹಿಸುವ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸಬೇಕು. ಸುರಕ್ಷಾ ಸಾಮಾಗ್ರಿ ನೀಡದೆ ಪೌರ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛಗೊಳಿಸಿದ ಮುಖ್ಯಾಧಿಕಾರಿ ಮುರುಗೇಶ್ ಅವರನ್ನು ಅಮಾನತುಗೊಳಿಸಬೇಕು. ಗುತ್ತಿಗೆ ಪಡೆದಿರುವ ಅರ್ಕೇಶ್ವರ ಎಂಟರ್ ಪ್ರೈಸಸ್ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಸ್ಥಳಕ್ಕೆ ತೆರಳಿದ ಪುರಸಭೆ ಅಧ್ಯಕ್ಷ ಕೇಬಲ್ ಸುರೇಶ್, ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಗುತ್ತಿಗೆದಾ ರರನ್ನು ಕರೆಸಿ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಪುರಸಭೆ ಸದಸ್ಯೆ ಪ್ರಿಯಾಂಕ, ಮನೋಜ್, ಕಮಲ್‌ನಾತ್‌, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್, ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಟಿ.ಯಶವಂತ್, ಗಣೇಶ್, ಸತೀಶ್, ಚಂದ್ರು, ಪ್ರಶಾಂತ್, ಮಹೇಂದ್ರ, ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.