ADVERTISEMENT

ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಕಾವೇರಿ–2 ತಂತ್ರಾಂಶದಲ್ಲಿ ದೋಷ; ನೋಂದಣಿ ಪ್ರಕ್ರಿಯೆಯಲ್ಲಿ ವ್ಯತ್ಯಯ, ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:35 IST
Last Updated 1 ಏಪ್ರಿಲ್ 2023, 14:35 IST
ಕಾವೇರಿ–2 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಆಸ್ತಿ ನೋಂದಣಿಯಾಗುತ್ತಿಲ್ಲ ಎಂದು ಆರೋಪಿಸಿ  ಸಾರ್ವಜನಿಕರು ಶನಿವಾರ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಕಾವೇರಿ–2 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಆಸ್ತಿ ನೋಂದಣಿಯಾಗುತ್ತಿಲ್ಲ ಎಂದು ಆರೋಪಿಸಿ  ಸಾರ್ವಜನಿಕರು ಶನಿವಾರ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು   

ಮಂಡ್ಯ: ಕಾವೇರಿ–2 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಆಸ್ತಿ ನೋಂದಣಿಯಾಗದೇ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಶನಿವಾರ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ತಂತ್ರಾಂಶ ಅಳವಡಿಕೆ ಸಮರ್ಪಕವಾಗಿ ಆಗಿಲ್ಲ. ಆಸ್ತಿ ವಿವರ ತಿದ್ದುಪಡಿಗೆ ಆಗುತ್ತಿಲ್ಲ, ಆನ್‌ಲೈನ್‌ ಪಾವತಿಯಲ್ಲೂ ತೊಂದರೆ ಇದೆ. ಮುಂದ್ರಾಂಕ ಶುಲ್ಕ, ನೋಂದಣಿ ಶುಲ್ಕ ಪಾವತಿ ನಂತರ ಯಾವ ಸಮಯದಲ್ಲಿ ನೋಂದಣಿಗೆ ಹಾಜರಾಗಬೇಕು ಎಂಬ ಮಾಹಿತಿ ಸಿಗುತ್ತಿಲ್ಲ. ಕಚೇರಿಯಲ್ಲೂ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉಪ ನೋಂದಣಾಧಿಕಾರಿ ಕಚೇರಿಯ ಸಹಾಯವಾಣಿಯಿಂದ ಯಾವುದೇ ಸಹಾಯ ಸಿಗುತ್ತಿಲ್ಲ. 3–4 ಬಾರಿ ನೋಂದಣಿಗೆ ಬಂದರೂ ಸರಿಯಾಗಿ ಸೇವೆ ದೊರೆಯುತ್ತಿಲ್ಲ. ಮೊದಲು ಹಣ ಕಟ್ಟಿ ಅಂತಾರೆ, ನಂತರ ನೋಂದಣಿಗೆ ತೆರಳಿದಾಗ ಪಾವತಿ ಮಾಡಿದ ಹಣದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಮಾಹಿತಿಯನ್ನು ಸರಿಯಾಗಿ ತೋರಿಸುತ್ತಿಲ್ಲ ಎಂದರು.

ADVERTISEMENT

ಕಂಪ್ಯೂಟರ್‌ ನಿರ್ವಹಣೆ ಮಾಡುವ ಸಿಬ್ಬಂದಿ ಕೂಡ ಸಿಗುತ್ತಿಲ್ಲ. ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ. ನೋಂದಣಿಯ ಪ್ರಕ್ರಿಯೆಯನ್ನು ಆನ್‌ಲೈನ್‌ ಮಾಡಿದರೂ ಅದನ್ನು ಸರಿಯಾಗಿ ಜಾರಿ ಮಾಡಿಲ್ಲ. ತಂತ್ರಜ್ಞರ ಸಹಾಯ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪ ನೋಂದಣಾಧಿಕಾರಿ ರುಕ್ಮಿಣಿ ‘ತಾಂತ್ರಿಕ ಸಮಸ್ಯೆ ಸರಿ ಮಾಡಿಸಲು ತಿಳಿಸಿದ್ದೇವೆ, ಮಂಡ್ಯ ಜೂಟ್‌ ಆ್ಯಪ್‌ನಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಏ.12 ರೊಳಗೆ ಎಲ್ಲ ಕಡೆ ಜಾರಿಯಾಗಿ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಯುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.