ADVERTISEMENT

ಮಳವಳ್ಳಿ: ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಸಾವು; ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 7:05 IST
Last Updated 28 ಡಿಸೆಂಬರ್ 2021, 7:05 IST
ಅಪಘಾತದಲ್ಲಿ ಮೃತಪಟ್ಟ ಶರತ್ ಶವವಿದ್ದ ಆಂಬುಲೆನ್ಸ್‌ನೊಂದಿಗೆ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ರಾಗಿಬೊಮ್ಮನಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಅಪಘಾತದಲ್ಲಿ ಮೃತಪಟ್ಟ ಶರತ್ ಶವವಿದ್ದ ಆಂಬುಲೆನ್ಸ್‌ನೊಂದಿಗೆ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ರಾಗಿಬೊಮ್ಮನಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಮಳವಳ್ಳಿ: ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಂತಿ ಕಾಲೇಜಿನ ವಿದ್ಯಾರ್ಥಿ ಶರತ್ ಭಾನುವಾರ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶಾಂತಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರಾಗಿಬೊಮ್ಮನಹಳ್ಳಿ ಗ್ರಾಮಸ್ಥರು ಕಾಲೇಜು ಮುಂಭಾಗ ಸೋಮವಾರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮಕ್ಕೆ ಶರತ್ ಶವ ತರುವ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹುಚ್ಚೇಗೌಡನದೊಡ್ಡಿ ಗೇಟ್ ಬಳಿ ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ಅಪಘಾತ ಎಸಗಿದ ಕಾರು ಚಾಲಕ ಬೆಂಗಳೂರು ನಗರದ ಪೋಲಿಸ್ ಕಾನ್‌ಸ್ಟೆಬಲ್‌ ಆಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಹಾಗೂ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಕಿಡಿಕಾರಿದರು. ಶವವಿದ್ದ ಆಂಬುಲೆನ್ಸ್ ಹಿಂಬಾಲಿಸಿದ ಪ್ರತಿಭಟನಕಾರರು ಶಾಂತಿ ಕಾಲೇಜು ಮುಂಭಾಗ ಸೇರಿದರು. ಕಾಲೇಜಿನ ಮುಂಭಾಗದಲ್ಲೇ ಅಪಘಾತವಾಗಿದ್ದರೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಪರಿಸ್ಥಿತಿ ವಿಕೋಪಕ್ಕೆತಿರುಗುವುದನ್ನು ಅರಿತ ಸಿಪಿಐಗಳಾದ ಡಿ.ಪಿ.ಧನರಾಜ್ ಹಾಗೂ ಎ.ಕೆ.ರಾಜೇಶ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಸ್ಪಷ್ಟನೆ ನೀಡಿದರು.

ದೂರು ಬಂದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಅಪಘಾತ ಎಸಗಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಯಾವುದೇ ಲೋಪವಾಗಿಲ್ಲ ಎಂದು ಎಫ್ಐಆರ್ ಪ್ರತಿ ನೀಡಿದ ನಂತರ ಪ್ರತಿಭಟನಕಾರರು ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಅನುವು ಮಾಡಿ ಪ್ರತಿಭಟನೆಯನ್ನು ವಾಪಾಸು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.