
ಪಾಂಡವಪುರ: ತಾಲ್ಲೂಕಿನ ಬನಘಟ್ಟ ಗೇಟ್ ಬಳಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಹೊಸ ಸೇತುವೆ ಉದ್ಘಾಟನೆಗೆ ಆಗ್ರಹಿಸಿ ಬಿಜೆಪಿ ಮುಖಂಡ ಎಚ್.ಎನ್. ಮಂಜುನಾಥ್ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಸೇತುವೆ ನಿರ್ಮಾಣವಾಗಿ ಹಲವಾರು ವರ್ಷಗಳೇ ಕಳೆದರೂ ತಾಂತ್ರಿಕ ಸಮಸ್ಯೆ ಇದೆ ಎಂಬ ನೆಪವೊಡ್ಡಿ ಅಧಿಕಾರಿಗಳು ಸೇತುವೆ ಉದ್ಫಾಟಿಸುತ್ತಿಲ್ಲ. ಇದರಿಂದಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸಂಚಾರರಿಗೆ ಬಹಳ ತೊಂದರೆ ಉಂಟಾಗಿದೆ. ಇಲ್ಲಿ ಹಲವಾರು ಅಪಘಾತಗಳು ಉಂಟಾಗಿ ಅಪಾರ ಸಾವು ನೋವು ಸಂಭವಿಸಿವೆ. ಸೇತುವೆ ಉದ್ಫಾಟನೆ ಆಗದ ಕಾರಣ, ರಸ್ತೆ ನಿರ್ಮಾಣ ಪೂರ್ಣಗೊಳ್ಳದೆ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಕಿರಿದಾಗಿದ್ದು, ಉಬ್ಬು ತಗ್ಗುಗಳು ಹೆಚ್ಚಾಗಿರುವುದರಿಂದ ವಾಹನ ಸವಾರರು ಫಜೀತಿ ಪಡುವಂತಾಗಿದೆ. ಹೊಸ ಸೇತುವೆ ಉದ್ಫಾಟನೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲವೇ ಸೇತುವೆ ಉದ್ಪಾಟನೆ ಆಗುವರೆಗೂ ಈ ಹಿಂದಿನಂತೆಯೆ ಯಥಾಸ್ಥಿತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಉಜ್ಜೈನ್ ಕೊಪ್ಪ, ಎಇ ಚೇತನ್ ಅವರನ್ನು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡರು.
‘ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೂಡಲೇ ಸೇತುವೆ ಉದ್ಫಾಟಿಸಬೇಕು. ಜತೆಗೆ ಪ್ರಾಧಿಕಾರದ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ಸೇತುವೆ ಸಮಸ್ಯೆ ಬಗೆಹರಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
‘ಫೆ.12ರಂದು ಸೇತುವೆ ಸಮಸ್ಯೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಉಜ್ಜೈನ್ ಕೊಪ್ಪ ತಿಳಿಸಿದರಾದರೂ ಪ್ರತಿಭಟನಕಾರರು ಒಪ್ಪದೆ ಪ್ರತಿಭಟನೆ ಮುಂದುವರಿಸಿದರು.
ಮಧ್ಯೆ ಪ್ರವೇಶಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಶರತ್ ಕುಮಾರ್ ಪ್ರತಿಭಟನಾಕಾರರ ಮನವೊಲಿಸಿ, ‘ಮೇಲಾಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಚರ್ಚಿಸಿ ಫೆ.18ರ ಒಳಗಾಗಿ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಬಾಲಗಂಗಾಧರ್, ಹಿರೇಮರಳಿ ಶೀನಪ್ಪ, ವೀರಭದ್ರಸ್ವಾಮಿ, ಗಾಣದಹೊಸೂರು ಕೃಷ್ಣೇಗೌಡ, ಹಿರೇಮರಳಿ ಗ್ರಾ.ಪಂ.ಉಪಾಧ್ಯಕ್ಷ ಮನು, ಮಾಜಿ ಉಪಾಧ್ಯಕ್ಷ ಕೆ.ಸಿ.ಕುಮಾರಸ್ವಾಮಿ, ಸ್ಥಳೀಯ ಗ್ರಾಮಸ್ಥರಾದ ಕೆ.ಹೊಸೂರು ರಮೇಶ್, ಜಗಣ್ಣ, ಸ್ವಾಮಿಗೌಡ, ನಾಗೇಶ್, ಅಶೋಕ, ನವೀನ್, ಸುನೀಲ್, ಜ್ಞಾನೇಶ್, ಆಟೋ ಜಲೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.