ಮದ್ದೂರು: ಮಂಡ್ಯದ ಸ್ವರ್ಣಸಂದ್ರ ಬಳಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದರ ಪರಿಣಾಮ ತಾಲ್ಲೂಕಿನ ಗೊರವನಹಳ್ಳಿಯ ಅಶೋಕ್ - ವಾಣಿಶ್ರೀ ದಂಪತಿಯ ಪುತ್ರಿ 3 ವರ್ಷದ ಮಗು ರಿತೀಕ್ಷಾ ಮೃತಪಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದರೆ, ಪೋಷಕರು ಮಂಡ್ಯದ ಜಿಲ್ಲಾಸ್ಪತ್ರೆಗೆ ಆತುರಾತುರದಿಂದ ಕರೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ, ದುರ್ಘಟನೆಯೂ ಸಂಭವಿಸುತ್ತಿರಲಿಲ್ಲ ಎಂದು ಪಟ್ಟಣದ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಮುಖ್ಯವೈದ್ಯಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನ.ಲಿ. ಕೃಷ್ಣ ಮಾತನಾಡಿ, ‘ಸೋಮವಾರ ಗೊರವನಹಳ್ಳಿ ಗ್ರಾಮದಲ್ಲಿ ಮಗು ಮನೆ ಮುಂದೆ ಆಟವಾಡುತ್ತಿದ್ದ ವೇಳೆ ನಾಯಿಯೊಂದು ಕಚ್ಚಿದ್ದರಿಂದ ಮಗುವನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ. ಆ ವೇಳೆ ಆಸ್ಪತ್ರೆಯ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಡ್ಯದ ಮಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಇಲ್ಲೇ ಸೂಕ್ತ ಚಿಕಿತ್ಸೆ ನೀಡಲಿಲ್ಲವೇಕೆ? ತಲೆಗೆ ನಾಯಿ ಕಚ್ಚಿದ್ದರೂ ಆಂಬುಲೆನ್ಸ್ ಮೂಲಕವಾದರೂ ಬಾಲಕಿಯನ್ನು ಕಳುಹಿಸಬಹುದಿತ್ತಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಉಮಾಶಂಕರ್ ಮಾತನಾಡಿ, ‘ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಸಾರ್ವಜನಿಕರಿಗೆ ಚಿಕಿತ್ಸೆ ಸಿಗುತ್ತಿಲ್ಲ ಸ್ಕ್ಯಾನಿಂಗ್‌ಗೆ ಹೊರಗಡೆ ಕಳುಹಿಸುತ್ತಾರೆ. ಅಷ್ಟೇ ಅಲ್ಲದೇ, ಎಷ್ಟೋ ರೋಗಿಗಳಿಗೆ ಮಂಡ್ಯಕ್ಕೆ ಹೋಗಿ ಎನ್ನುತ್ತಾರೆ ಏಕೆ? ತಾಲ್ಲೂಕು ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಸರಿ ಹೋಗುವುದು ಯಾವಾಗ? ಮೃತಪಟ್ಟ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದು ಇದಕ್ಕೆ ನ್ಯಾಯ ಸಲ್ಲಿಸುವವರು ಯಾರು’ ಎಂದು ಬೇಸರ ವ್ಯಕ್ತಪಡಿಸಿದರು.
ತಹಶೀಲ್ದಾರ್ ಸ್ಮಿತಾ, ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ. ಗೌಡ, ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ ಪಶು ಸಂಗೋಪನಾ ಇಲಾಖೆಯ ಡಾ.ಗೋವಿಂದ್, ತಾ.ಪಂ ಇ.ಒ ರಾಮಲಿಂಗಯ್ಯ ಸೇರಿದಂತೆ ಹಲವರು ಬಂದು ಪ್ರತಿಭಟನಾಕಾರರ ದೂರುಗಳನ್ನು ಆಲಿಸಿದರು.
ಈ ವೇಳೆ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾತನಾಡಿ, ‘ಈ ರೀತಿಯ ದುರ್ಘಟನೆ ಆಗಬಾರದಿತ್ತು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರೂ ಸೇರಿದಂತೆ ಎಲ್ಲಾ ಆಯಾಮದಲ್ಲೂ ತನಿಖಾ ತಂಡವನ್ನು ರಚಿಸಿ ಸೂಕ್ತ ತನಿಖೆ ನಡೆಸಲಾಗುವುದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಅವ್ಯವಸ್ಥೆಗಳಿದ್ದರೂ ಆ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಂಕರೇಗೌಡ, ಚನ್ನಸಂದ್ರ ಲಕ್ಷ್ಮಣ್, ಮ.ನ. ಪ್ರಸನ್ನ ಕುಮಾರ್, ಮರಳಿಗ ಶಿವರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಉಮೇಶ್, ಹೂತಗೆರೆ ಜನಾರ್ದನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.