ADVERTISEMENT

ಭಾರತೀನಗರ| ಟನ್ ಕಬ್ಬು: ₹ 5 ಸಾವಿರ ನಿಗದಿಗೆ ಒತ್ತಾಯ

ಚಾಂಷುಗರ್ಸ್ ಮುಂದೆ ಕಬ್ಬು ಬೆಳೆಗಾರರ ಪ್ರತಿಭಟನೆ; ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 14:47 IST
Last Updated 20 ಜುಲೈ 2023, 14:47 IST
ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರಿಗೆ ಪ್ರತಿಭಟನಕಾರರು ಮನವಿ ಪತ್ರ ಸಲ್ಲಿಸಿದರು.
ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರಿಗೆ ಪ್ರತಿಭಟನಕಾರರು ಮನವಿ ಪತ್ರ ಸಲ್ಲಿಸಿದರು.   

ಭಾರತೀನಗರ: ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂಭಾಗ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು, ರೈತ ಮಹಿಳೆಯರು ಪ್ರತಿಭಟನೆ ನಡೆಸಿದರು.

ಇಲ್ಲಿಯ ಮಂಡ್ಯ ರಸ್ತೆಯ ಮಾರುತಿ ಚಿತ್ರ ಮಂದಿರದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಪ್ರತಿಭಟನಾಕಾರರು ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯ ಮೂಲಕ ಕಾರ್ಖಾನೆ ಬಳಿ ಸೇರಿದರು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ, ಸಕ್ಕರೆ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದರು.

ಕಾರ್ಖಾನೆ ಅತಿಥಿ ಗೃಹದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಧರಣಿ ನಿರತರನ್ನು ಉದ್ದೇಶಿಸಿ ಸಂಘದ ರಾಜ್ಯ ಘಟಕದ ಸಂಚಾಲಕ ಎನ್‌.ಎಲ್‌.ಭರತ್‌ರಾಜು, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಲ್‌.ಕೃಷ್ಣೇಗೌಡ ಮಾತನಾಡಿ, ‘ಪ್ರತಿ ಟನ್‌ ಕಬ್ಬಿಗೆ ಶೇ 9 ಇಳುವರಿ ಆಧಾರದಲ್ಲಿ ₹ 5 ಸಾವಿರ ಬೆಲೆ ನಿಗದಿಮಾಡಬೇಕು, ಡಾ.ಸ್ವಾಮಿನಾಥನ್‌ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿಗೊಳಿಸಬೇಕು. ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡಬೇಕು, ಕಳೆದ ಸಾಲಿನಲ್ಲಿ ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿಯಾಗಿ ₹ 100 ನೀಡುವುದು ಸೇರಿದಂತೆ 16 ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್‌ ನರಸಿಂಹಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ ಬಂದರು. ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಎ.ಸಿ ಶಿವಮೂರ್ತಿ ಮಾತನಾಡಿ, ‘ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಲಾಗುವುದು. ಸ್ಥಳೀಯ ಮಟ್ಟದಲ್ಲೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತ ಮುಖಂಡರು, ಕಾರ್ಖಾನೆ ಆಡಳಿತ ಮಂಡಳಿಯವರ ಸಭೆ ಕರೆದು ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಕಾರ್ಯದರ್ಶಿ ಗುಳಘಟ್ಟ ಸತೀಶ್‌, ಮುಖಂಡರಾದ ನಾಗೇಂದ್ರ, ಶಿವರಾಮು. ಧ್ರುವ ಸರಗೂರು, ಲತಾ, ಬೋರೇಗೌಡ, ಲಕ್ಷ್ಮಣ್‌, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮೇಶ, ಮುಖಂಡ ಎನ್‌.ಲಿಂಗರಾಜಮೂರ್ತಿ, ಜನವಾದಿ ಮಹಿಳಾ ಸಂಘದ ಶೋಭಾ, ಪ್ರಾಂತ ರೈತ ಸಂಘದ ಮುಖಂಡರಾದ ಎನ್‌.ಲಿಂಗರಾಜಮೂರ್ತಿ, ಸಿದ್ದೇಗೌಡ, ಶಿವಕುಮಾರ್‌, ಮರಿಲಿಂಗೇಗೌಡ, ಗುರುಸ್ವಾಮಿ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.

ಚಾಂಷುಗರ್ಸ್‌ ಉಪಾಧ್ಯಕ್ಷ ಮಣಿ, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.